ಮಣಿಪುರ ವಿಚಾರವಾಗಿ ಗೋವಾ ಸದನದಲ್ಲಿ ಗದ್ದಲ: ಎಲ್ಲಾ 7 ಪ್ರತಿಪಕ್ಷ ಸದಸ್ಯರು ಎರಡು ದಿನಗಳ ಅವಧಿಗೆ ಅಮಾನತು

ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಗೋವಾ ವಿಧಾನಸಭೆಯ ಎಲ್ಲಾ ಏಳು ಪ್ರತಿಪಕ್ಷಗಳ ಸದಸ್ಯರನ್ನು ಸೋಮವಾರ ಎರಡು ದಿನಗಳ ಕಾಲ ಅಮಾನತುಗೊಳಿಸಲಾಯಿತು.
ಗೋವಾ ವಿಧಾನಸಭೆ
ಗೋವಾ ವಿಧಾನಸಭೆ
Updated on

ಪಣಜಿ: ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಗೋವಾ ವಿಧಾನಸಭೆಯ ಎಲ್ಲಾ ಏಳು ಪ್ರತಿಪಕ್ಷಗಳ ಸದಸ್ಯರನ್ನು ಸೋಮವಾರ ಎರಡು ದಿನಗಳ ಕಾಲ ಅಮಾನತುಗೊಳಿಸಲಾಯಿತು.

ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ, ಕಾಂಗ್ರೆಸ್ ಶಾಸಕರಾದ ಅಲ್ಟೋನ್ ಡಿ'ಕೋಸ್ಟಾ ಮತ್ತು ಕಾರ್ಲೋಸ್ ಫೆರೇರಾ, ಎಎಪಿಯ ವೆಂಜಿ ವಿಗಾಸ್ ಮತ್ತು ಕ್ರೂಜ್ ಸಿಲ್ವಾ, ಗೋವಾ ಫಾರ್ವರ್ಡ್ ಪಾರ್ಟಿಯ ವಿಜಯ್ ಸರ್ದೇಸಾಯಿ ಮತ್ತು ರೆವಲ್ಯೂಷನರಿ ಗೋನ್ಸ್ ಪಾರ್ಟಿಯ ವೀರೇಶ್ ಬೋರ್ಕರ್ ಅಮಾನತುಗೊಂಡವರು.

ಪ್ರಶ್ನೋತ್ತರ ಅವಧಿಯ ನಂತರ, ಅಲೆಮಾವೊ ಅವರು ಸದನದಲ್ಲಿ ಮಣಿಪುರ ಹಿಂಸಾಚಾರದ ಕುರಿತು ಚರ್ಚೆಗೆ ವಿನಂತಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಸದಸ್ಯರ ನಿರ್ಣಯವನ್ನು ಹಿಂದಿನ ಶುಕ್ರವಾರ ಕ್ರೂಜ್ ಸಿಲ್ವಾ ಅವರು ಮಂಡಿಸಿದ್ದರು. ಆಗಲೂ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಆ ಸಮಯದಲ್ಲಿ ನಿರ್ಣಯದ ಕುರಿತು ಚರ್ಚಿಸಲು ಅನುಮತಿ ನೀಡಿರಲಿಲ್ಲ.
ಪ್ರತಿಪಕ್ಷದ ಸದಸ್ಯರೆಲ್ಲರೂ ಕಪ್ಪು ಬಟ್ಟೆ ಧರಿಸಿ ಸದನದಲ್ಲಿ ಗದ್ದಲ ಸೃಷ್ಟಿಸಿದರು. 

'ಈ ವಿಚಾರದಲ್ಲಿ ಇಡೀ ದೇಶವೇ ಸಂವೇದನಾಶೀಲವಾಗಿದೆ. ಕೇಂದ್ರ ಗೃಹ ಸಚಿವಾಲಯವು ಈ ಸಮಸ್ಯೆಯತ್ತ ಗಮನಹರಿಸುತ್ತಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲಾಗಿದೆ. ನಾವು ಸದನದಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ' ಎಂದು ಸ್ಪೀಕರ್ ಹೇಳಿದರು.

ಈ ಉತ್ತರದಿಂದ ಅತೃಪ್ತಗೊಂಡ ಪ್ರತಿಪಕ್ಷ ಸದಸ್ಯರು ಮಣಿಪುರ, ಮಣಿಪುರ ಎಂದು ಘೋಷಣೆ ಕೂಗುತ್ತಾ ಸದನದ ಬಾವಿಗೆ ಧಾವಿಸಿದರು.

ಬಿಜೆಪಿ ಆಡಳಿತದ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಎಂಜಿಪಿ ಶಾಸಕ ಜಿತ್ ಅರೋಲ್ಕರ್ ಅವರು ಮಾತನಾಡುವುದನ್ನು ಮುಂದುವರಿಸುತ್ತಿದ್ದಂತೆ, ವಿರೋಧ ಪಕ್ಷದ ಸದಸ್ಯರು ಪೋಸ್ಟರ್‌ಗಳೊಂದಿಗೆ ಅವರತ್ತ ಧಾವಿಸಿ ಅವರನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು.

ಈ ವೇಳೆ, ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್‌ಗಳು ಸದನದಿಂದ ಹೊರಕ್ಕೆ ಕರೆದೊಯ್ದರು. ಘಟನೆ ನಂತರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಪರಿಸರ ಸಚಿವ ನೀಲೇಶ್ ಕಬ್ರಾಲ್ ಅವರು ವಿರೋಧ ಪಕ್ಷದ ಸದಸ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಾವಂತ್ ಹೇಳಿದರು.

ಸ್ಪೀಕರ್ ತಾವಡ್ಕರ್ ಅವರು ಏಳು ವಿರೋಧ ಪಕ್ಷದ ಶಾಸಕರನ್ನು ಇಂದಿನಿಂದ ಎರಡು ದಿನಗಳ ಕಾಲ ವಿಧಾನಸಭೆಯಿಂದ ಅಮಾನತುಗೊಳಿಸಿದರು. 

ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ ನೂರಾರು ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com