ನಿಯಮ 267 ಅಡಿ ಮಣಿಪುರ ಪರಿಸ್ಥಿತಿ ಕುರಿತ ಚರ್ಚೆಗೆ ವಿಪಕ್ಷ ಪಟ್ಟು, ರಾಜ್ಯಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

ಸೋಮವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆಯಲ್ಲಿ ಮಣಿಪುರ ವಿಷಯದ ಚರ್ಚೆಗೆ ಸರ್ಕಾರ ಒಪ್ಪಿಗೆ ನೀಡಿತು ಆದರೆ ಪ್ರತಿಪಕ್ಷಗಳು ಸದನದ ನಿಯಮ 267 ರ ಅಡಿಯಲ್ಲಿ ಮಾತ್ರ ಚರ್ಚೆಗೆ ಒತ್ತಾಯಿಸಿದವು. ಇದರಿಂದಾಗಿ ಭೋಜನ ವಿರಾಮಕ್ಕೂ ಮುನ್ನಾ ಎರಡು ಬಾರಿ ಕಲಾಪವನ್ನು ಸಭಾಪತಿ ಮುಂದೂಡಿದರು. 
ರಾಜ್ಯಸಭೆಯಲ್ಲಿ ಸಭಾನಾಯಕ ಪಿಯೂಷ್ ಗೋಯೆಲ್
ರಾಜ್ಯಸಭೆಯಲ್ಲಿ ಸಭಾನಾಯಕ ಪಿಯೂಷ್ ಗೋಯೆಲ್

ನವದೆಹಲಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮತ್ತು ಮಹಿಳೆಯರ ವಿವಸ್ತ್ರಗೊಳಿಸಿ ಅತ್ಯಾಚಾರ ಪ್ರಕರಣ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಿ ವಿಪಕ್ಷಗಳು ಸಂಸತ್ ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಉಭಯ ಸದನಗಳಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿರುವುದರಿಂದ ಯಾವುದೇ ಚರ್ಚೆ ಆಗದೆ ಕಲಾಪ ವ್ಯರ್ಥವಾಗುತ್ತಿದೆ.

ಸೋಮವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆಯಲ್ಲಿ ಮಣಿಪುರ ವಿಷಯದ ಚರ್ಚೆಗೆ ಸರ್ಕಾರ ಒಪ್ಪಿಗೆ ನೀಡಿತು ಆದರೆ ಪ್ರತಿಪಕ್ಷಗಳು ಸದನದ ನಿಯಮ 267 ರ ಅಡಿಯಲ್ಲಿ ಮಾತ್ರ ಚರ್ಚೆಗೆ ಒತ್ತಾಯಿಸಿದವು. ಇದರಿಂದಾಗಿ ಭೋಜನ ವಿರಾಮಕ್ಕೂ ಮುನ್ನಾ ಎರಡು ಬಾರಿ ಕಲಾಪವನ್ನು ಸಭಾಪತಿ ಮುಂದೂಡಿದರು. 

ರಾಜ್ಯಸಭಾ ನಿಯಮಾವಳಿಯ 267 ನೇ ನಿಯಮವು ಸದಸ್ಯರು ಸೂಚಿಸಿದ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ದಿನದ ಕಲಾಪವನ್ನು ಸ್ಥಗಿತಗೊಳಿಸಲು ಅನುಮತಿಸುತ್ತದೆ. 267ನಿಯಮದಡಿ 65 ನೋಟಿಸ್ ಗಳನ್ನು ಸ್ವೀಕರಿಸಿದ್ದು, ಅವೆಲ್ಲವನ್ನೂ ಓದಬೇಕೇ ಎಂದು ಸಭಾಪತಿ ಜಗದೀಪ್ ಧನಕರ್ ಸದಸ್ಯರಿಗೆ ಕೇಳಿದರು. ಈ ಸಂದರ್ಭದಲ್ಲಿ  ಇದ್ದಕ್ಕಿದ್ದಂತೆ ಎದ್ದುನಿಂತ ಕೇಂದ್ರ ಸಚಿವ ಹಾಗೂ ಸಭಾನಾಯಕ ಪಿಯೂಷ್ ಗೋಯಲ್,  ಮಣಿಪುರ ವಿಷಯದ ಕುರಿತು ಮಧ್ಯಾಹ್ನ 2 ಗಂಟೆಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.

ವಿಪಕ್ಷ ಸದಸ್ಯರು ತಮ್ಮಗೆ ನೀಡಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.ಸರ್ವಪಕ್ಷ ಸಭೆಯಲ್ಲಿ ಚರ್ಚೆಗೆ  ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಮತ್ತು ಮುಂಗಾರು ಅಧಿವೇಶನದ ಮೊದಲ ದಿನವೇ ಚರ್ಚೆ ನಡೆಯಬಹುದಿತ್ತು ಆದರೆ ವಿರೋಧ ಪಕ್ಷಗಳು ಒಂಬತ್ತು ದಿನಗಳನ್ನು ವ್ಯರ್ಥ ಮಾಡಿದೆ. ಇದನ್ನು ಇಡೀ ದೇಶವು ವೀಕ್ಷಿಸುತ್ತಿದೆ. ನಿಯಮ 176 ಅಡಿಯಲ್ಲಿ ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದರು. ಆದರೆ, ವಿಪಕ್ಷಗಳು ಇದಕ್ಕೆ ಒಪ್ಪದಿದ್ದಾಗ ಕಲಾಪವನ್ನು  ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿತ್ತು. 

ಮತ್ತೆ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ  ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಲು ಸಭಾಪತಿ ಅವಕಾಶ ನೀಡಿದ್ದರೂ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಸಭಾಪತಿ ಮುಂದೂಡಿದರು. ಜುಲೈ 20 ರಂದು ಮುಂಗಾರು ಅಧಿವೇಶನಕ್ಕೆ ಸಭೆ ಸೇರಿದಾಗಿನಿಂದ ಮಣಿಪುರ ಹಿಂಸಾಚಾರ ಕುರಿತು ಸಮಗ್ರ ಚರ್ಚೆ ಹಾಗೂ ಪ್ರಧಾನಿ ಮೋದಿ ಹೇಳಿಕೆಗೆ ವಿಪಕ್ಷಗಳ ಸದಸ್ಯರು ಪ್ರತಿಭಟನೆ, ಗದ್ದಲ ಎಬ್ಬಿಸುತ್ತಿರುವುದರಿಂದ  ರಾಜ್ಯಸಭೆ ಕಲಾಪಕ್ಕೆ ಅಡ್ಡಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com