42 ವರ್ಷಗಳ ಹಿಂದೆ 10 ದಲಿತರನ್ನು ಕೊಂದ 90 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ!
ಫಿರೋಜಾಬಾದ್: 42 ವರ್ಷಗಳ ಹಿಂದೆ 10 ದಲಿತರನ್ನು ಹತ್ಯೆ ಮಾಡಿದ 90 ವರ್ಷದ ವ್ಯಕ್ತಿಯನ್ನು ದೋಷಿ ಎಂದು ಗುರುವಾರ ಘೋಷಿಸಿದ ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯ, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
42 ವರ್ಷಗಳ ಹಿಂದೆ ನಡೆದ ಈ ಹತ್ಯೆಗಳು ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಕೋರ್ಟ್, ಜೀವಂತವಾಗಿರುವ ಏಕೈಕ ಅಪರಾಧಿ ಗಂಗಾ ದಯಾಳ್‌ಗೆ ಜೀವಾವಧಿ ಶಿಕ್ಷೆ ಹಾಗೂ 55,000 ರೂ. ದಂಡ ವಿಧಿಸಿದೆ.
ದಂಡ ಪಾವತಿಸಲು ತಪ್ಪಿದಲ್ಲಿ ಆರೋಪಿ 13 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
1981ರಲ್ಲಿ ಸದುಪುರ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ 10 ದಲಿತರನ್ನು ನಿರ್ದಯವಾಗಿ ಹತ್ಯೆ ಮಾಡಲಾಗಿತ್ತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಹತ್ತು ಮಂದಿಯನ್ನು ಆರೋಪಿಗಳೆಂದು ಗುರುತಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಮತ್ತು 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಸರಕಾರಿ ವಕೀಲ ರಾಜೀವ್ ಉಪಾಧ್ಯಾಯ ತಿಳಿಸಿದ್ದಾರೆ.
ಆರಂಭದಲ್ಲಿ, ಮೈನ್‌ಪುರಿಯಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ನಂತರ, ಫಿರೋಜಾಬಾದ್ ಅನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಿದ ನಂತರ ಪ್ರಕರಣವನ್ನು ಫಿರೋಜಾಬಾದ್‌ನ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಎಂದು ವಕೀಲ ಉಪಾಧ್ಯಾಯ ಹೇಳಿದ್ದಾರೆ.
''ಹೈಕೋರ್ಟ್ ಆದೇಶದ ಮೇರೆಗೆ ಫಿರೋಜಾಬಾದ್ ಜಿಲ್ಲೆ ರಚನೆಯಾದ ನಂತರ ಪ್ರಕರಣವನ್ನು ಫಿರೋಜಾಬಾದ್‌ಗೆ ವರ್ಗಾಯಿಸಲಾಯಿತು. ಜೀವಂತವಾಗಿರುವ ಏಕೈಕ ಆರೋಪಿ ಗಂಗಾ ಸಹಾಯ್‌ಗೆ ಜೀವಾವಧಿ ಶಿಕ್ಷೆ ಮತ್ತು 55,000 ರೂ. ದಂಡವನ್ನು ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ ಎಂದು ವಕೀಲರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ