ವಿಡಿಯೋ: ಬಿಹಾರದಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆ ಕುಸಿತ, ತನಿಖೆಗೆ ಆದೇಶ!

ಬಿಹಾರದ ಭಾಗಲ್‌ಪುರದಲ್ಲಿ ನಿರ್ಮಾಣ ಹಂತದ ಸೇತುವೆಯೊಂದು ಭಾನುವಾರ ಕುಸಿದು ಬಿದ್ದಿದೆ. ಈ ಅಪಘಾತದ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ.
ಸೇತುವೆ ಕುಸಿತ
ಸೇತುವೆ ಕುಸಿತ

ಬಿಹಾರದ ಭಾಗಲ್‌ಪುರದಲ್ಲಿ ನಿರ್ಮಾಣ ಹಂತದ ಸೇತುವೆಯೊಂದು ಭಾನುವಾರ ಕುಸಿದು ಬಿದ್ದಿದೆ. ಈ ಅಪಘಾತದ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿಲ್ಲ, ಆದರೆ ಸೇತುವೆಯ ಕುಸಿತದಿಂದಾಗಿ ಸ್ಥಳೀಯರು ಭಯಭೀತರಾಗಿದ್ದಾರೆ. ಆದಾಗ್ಯೂ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಹೊಣೆಗಾರರನ್ನು ಗುರುತಿಸುವಂತೆ ಸೂಚಿಸಿದ್ದಾರೆ.

ಖಗಾರಿಯಾ-ಆಗುವಾನಿ-ಸುಲ್ತಂಗಂಜ್ ನಡುವೆ ನಿರ್ಮಿಸಲಾಗಿದ್ದ ಸೇತುವೆ ಕುಸಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಸ್ವಲ್ಪ ಸಮಯದಲ್ಲೇ ಇಡೀ ಸೇತುವೆ ಗಂಗಾ ನದಿಯಲ್ಲಿ ಮುಳುಗಿತು. ಅಚ್ಚರಿಯ ಸಂಗತಿ ಎಂದರೆ ಎರಡು ವರ್ಷಗಳ ಹಿಂದೆಯೂ ಈ ಸೇತುವೆಯ ಒಂದು ಭಾಗ ಕುಸಿದಿತ್ತು. 4 ವರ್ಷಗಳ ಹಿಂದೆ ಸಿಎಂ ನಿತೀಶ್ ಕುಮಾರ್ ಈ ಸೇತುವೆಗೆ ಶಂಕುಸ್ಥಾಪನೆ ಮಾಡಿದ್ದರು.

ಈ ಸೇತುವೆಯನ್ನು 1717 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ನಿರ್ಮಾಣ ಹಂತದಲ್ಲಿರುವ ಸೇತುವೆಯ ಕೆಲವು ಭಾಗವು ಏಪ್ರಿಲ್‌ನಲ್ಲಿ ಚಂಡಮಾರುತದಿಂದಾಗಿ ಹಾನಿಗೊಳಗಾಗಿತ್ತು. ಖಗಾರಿಯಾ-ಅಗುವಾನಿ-ಸುಲ್ತಂಗಂಜ್ ನಡುವೆ ಗಂಗಾನದಿಯಲ್ಲಿ ನಿರ್ಮಿಸಲಾಗುತ್ತಿದ್ದ ಮಹಾಸೇತುವಿನ ಮಧ್ಯಭಾಗ ಕುಸಿದಿದೆ. ಸೇತುವೆಯ ಮೇಲಿನ ಭಾಗ ನದಿಯಲ್ಲಿ ಮುಳುಗಿದೆ.

ನಿರ್ಮಾಣ ಹಂತದಲ್ಲಿರುವ ಸೇತುವೆಯ ಸೂಪರ್ ಸ್ಟ್ರಕ್ಚರ್ ಕುಸಿದಿರುವುದು ವಿಡಿಯೋದಲ್ಲಿ ಗೋಚರಿಸುತ್ತಿದೆ. ಆದರೆ, ಸೇತುವೆ ಕುಸಿತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸೇತುವೆಯ ಮೂರು ಪಿಲ್ಲರ್‌ಗಳ ಮೇಲೆ ನಿರ್ಮಿಸಿದ ಕಟ್ಟಡ ಕುಸಿದಿದೆ ಎಂದು ಹೇಳಲಾಗುತ್ತಿದೆ. ಭಾಗಲ್ಪುರದ ಸುಲ್ತಂಗಂಜ್‌ನಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯು ಖಗಾರಿಯಾ ಮತ್ತು ಭಾಗಲ್‌ಪುರವನ್ನು ಸಂಪರ್ಕಿಸುತ್ತದೆ. ನಿರ್ಮಾಣ ಹಂತದ ಸೇತುವೆ ಕುಸಿದ ಘಟನೆ ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ ಎಂದು ಡಿಡಿಸಿ ಭಾಗಲ್‌ಪುರ ಕುಮಾರ್ ಅನುರಾಗ್ ತಿಳಿಸಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯ ಆಡಳಿತ ಸ್ಥಳದಲ್ಲಿದೆ. 'ಪುಲ್ ನಿರ್ಮಾಣ್ ನಿಗಮ್' ಅವರಿಂದ ವರದಿ ಕೇಳಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com