ಅಭಿಷೇಕ್ ಬ್ಯಾನರ್ಜಿ ಪತ್ನಿ ರುಜಿರಾ ವಿದೇಶ ಪ್ರವಾಸಕ್ಕೆ ಅಧಿಕಾರಿಗಳ ತಡೆ

ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರು ದುಬೈಗೆ ತೆರಳುವುದನ್ನು ವಲಸೆ ಅಧಿಕಾರಿಗಳು ಸೋಮವಾರ ತಡೆದಿದ್ದಾರೆ.
ರುಜಿರಾ ಬ್ಯಾನರ್ಜಿ
ರುಜಿರಾ ಬ್ಯಾನರ್ಜಿ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರು ದುಬೈಗೆ ತೆರಳುವುದನ್ನು ವಲಸೆ ಅಧಿಕಾರಿಗಳು ಸೋಮವಾರ ತಡೆದಿದ್ದಾರೆ.

ಜೂನ್ 8 ರಂದು ತಮ್ಮ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ "ಲುಕ್‌ಔಟ್" ನೋಟಿಸ್ ಉಲ್ಲೇಖಿಸಿ ರುಜಿರಾ ಅವರು ದುಬೈ ವಿಮಾನ ಹತ್ತುವುದನ್ನು ತಡೆಯಲಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ.

ವಿಮಾನ ಹತ್ತಲು ರುಜಿರಾ ತನ್ನ ಇಬ್ಬರು ಮಕ್ಕಳೊಂದಿಗೆ ಇಂದು ಬೆಳಗ್ಗೆ 7 ಗಂಟೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ.

"ಪ್ರಕರಣವೊಂದರಲ್ಲಿ ಇಡಿ ಹೊರಡಿಸಿದ ಲುಕ್‌ಔಟ್ ನೋಟೀಸ್ ಅನ್ನು ಉಲ್ಲೇಖಿಸಿ ರುಜಿರಾ ಅವರನ್ನು ವಲಸೆ ಅಧಿಕಾರಿಗಳು ತಡೆದಿದ್ದಾರೆ. ಆದರೆ ಅವರ ವಿದೇಶಿ ಭೇಟಿಗಳಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೇಳುತ್ತದೆ" ಎಂದು ಅವರ ವಕೀಲರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ರುಜಿರಾ ಬ್ಯಾನರ್ಜಿ ಅವರ ದುಬೈ ಪ್ರಯಾಣದ ಬಗ್ಗೆ ಇಡಿಗೆ ಶನಿವಾರ ಮಾಹಿತಿ ನೀಡಲಾಗಿದೆ ಮತ್ತು ವಿಮಾನ ಟಿಕೆಟ್‌ಗಳ ಪ್ರತಿಯನ್ನು ಸಹ ಇಡಿಗೆ ನೀಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ.

ವಿಮಾನ ಹತ್ತದಂತೆ ತಮ್ಮನ್ನು ತಡೆದ ವಲಸೆ ಅಧಿಕಾರಿಗಳೊಂದಿಗೆ ಕೆಲಕಾಲ ವಾಗ್ವಾದ ನಡೆಸಿದ ರುಜಿರಾ ಅವರು ನಂತರ ವಿಮಾನ ನಿಲ್ದಾಣದಿಂದ ವಾಪಸ್ ಮನೆಗೆ ತೆರಳಿದ್ದಾರೆ.

ಇನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com