ಭೋಪಾಲ್: ಇತ್ತೀಚೆಗೆ ವಿವಾದಿತ ಹಿಂದಿ ಚಿತ್ರ ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಥಿಯೇಟರ್‌ಗೆ ತೆರಳಿದ್ದ 18 ವರ್ಷದ ಯುವತಿ ಮತ್ತೊಮ್ಮೆ ನಾಪತ್ತೆಯಾಗಿದ್ದಾಳೆ. ಆಕೆಯ ಪೋಷಕರು ಭೋಪಾಲ್‌ನ ಕಮಲಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಈ ಹಿಂದೆಯೂ ಮೇ 11ರಂದು ಯುವತಿ ನಾಪತ್ತೆಯಾಗಿದ್ದು, ಪೊಲೀಸರು ಆಕೆಯನ್ನು ಹುಡುಕಿ ಮನೆಗೆ ಕರೆತಂದಿದ್ದರು.
ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಇತ್ತೀಚೆಗೆ ಥಿಯೇಟರ್‌ನಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾ ವೀಕ್ಷಿಸಲು ಆಕೆಯನ್ನು ಕರೆದುಕೊಂಡು ಹೋಗಿದ್ದರು. ಆದರೆ, ಅದಾದ ಕೆಲವು ದಿನಗಳ ನಂತರ ಆಕೆಯ ಪೋಷಕರು ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ಮತ್ತೆ ದೂರು ದಾಖಲಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ತನ್ನ ಮುಸ್ಲಿಂ ಗೆಳೆಯನೊಂದಿಗೆ ಓಡಿಹೋಗಿರಬಹುದು ಎಂದು ಕುಟುಂಬದವರು ಶಂಕಿಸಿದ್ದಾರೆ. 70,000 ನಗದು ಮತ್ತು ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕುಟುಂಬದವರು ದೂರು ದಾಖಲಿಸಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ. ಯುವತಿ ಪತ್ತೆಯಾದ ನಂತರ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಮತ್ತು ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಮಲಾ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಬಾಜಪೇಯಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಮೇ 11 ರಂದು ಯುವತಿ ಒಮ್ಮೆ ನಾಪತ್ತೆಯಾದಾಗ ಕುಟುಂಬವು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ಸಹಾಯವನ್ನು ಕೋರಿತ್ತು ಮತ್ತು ಅಂತಿಮವಾಗಿ ಪೊಲೀಸರ ಸಹಾಯದಿಂದ ಆಕೆಯನ್ನು ಹುಡುಕಿ ಕರೆತರಲಾಗಿತ್ತು. ಪ್ರಜ್ಞಾ ಸಿಂಗ್ ಠಾಕೂರ್ ಅವರು 'ದಿ ಕೇರಳ ಸ್ಟೋರಿ' ವೀಕ್ಷಿಸಲು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದ ಮಹಿಳೆಯರ ಗುಂಪಿನಲ್ಲಿ ಯುವತಿಯೂ ಇದ್ದಳು.
ಮೇ 15ರಂದು ಬೆಳಗ್ಗೆ ಮಹಿಳೆ ನಾಪತ್ತೆಯಾಗಿದ್ದು, ಎದ್ದಾಗ ಮನೆಯಲ್ಲಿ ಆಕೆ ಇರಲಿಲ್ಲ ಎಂದು ಮನೆಯವರು ಹೇಳಿಕೊಂಡಿದ್ದಾರೆ. ದೂರು ದಾಖಲಿಸಲು ಹೋದಾಗ ಪೊಲೀಸರು ಸಹಕರಿಸಲು ಸಿದ್ಧರಿರಲಿಲ್ಲ ಎಂದು ಆರೋಪಿಸಿದ್ದಾರೆ.
ನರ್ಸಿಂಗ್ ಶಾಲೆಯಲ್ಲಿ ತನ್ನ ಸಹಪಾಠಿಯಾಗಿದ್ದ ಯುವತಿಯ ಮೂಲಕ ಯೂಸುಫ್ ಖಾನ್ ಎಂಬಾತನ ಸಂಪರ್ಕಕ್ಕೆ ಯುವತಿ ಬಂದಿದ್ದಳು. ಆ ವ್ಯಕ್ತಿ ಶಾಲೆ ಬಿಟ್ಟವನು ಮತ್ತು ರೌಡಿ ಶೀಟರ್ ಆಗಿದ್ದವನು. ಆತನ ಮೇಲೆ ಹಲ್ಲೆ, ಕಳ್ಳತನ ಮತ್ತು ಬೆಂಕಿ ಹಚ್ಚಿದಂತಹ ಅಪರಾಧಗಳ ಆರೋಪವಿದೆ.
Advertisement