
ನವದೆಹಲಿ: ಬಿಜೆಪಿ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕ್ರಮಗಳ ಭಾಗವಾಗಿ ಜೂನ್ 10 ಮತ್ತು 11 ರಂದು ನಾಲ್ಕು ರಾಜ್ಯಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಮಿತ್ ಶಾ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ಎನ್ ಚಂದ್ರಬಾಬು ನಾಯ್ಡು ಮತ್ತು ಅಮಿತ್ ಶಾ ಭೇಟಿ ನಂತರ ತೆಲುಗು ದೇಶಂ ಪಕ್ಷದೊಂದಿಗೆ ಬಿಜೆಪಿ ಕೈಜೋಡಿಸಲಿದೆಯೇ ಚರ್ಚೆ ಜೋರಾಗಿದ್ದು, ರಾಜಕೀಯ ವಾತಾವರಣವು ಗರಿಗೆದರಿದೆ.
ಶಾ ಭಾನುವಾರ ಆಂಧ್ರಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಇದುವರೆಗಿನ ಪ್ರಮುಖ ವಿಷಯಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಬೆಂಬಲ ನೀಡುತ್ತಾ ಬಂದಿದೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಜೂನ್ 10 ರಂದು ರಾಜ್ಯದ ತಿರುಪತಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಶನಿವಾರ ಗುಜರಾತ್‌ನ ಪಟಾನ್ ಮತ್ತು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಶಾ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ನಾಂದೇಡ್‌ನಲ್ಲಿರುವ ಹಜೂರ್ ಅಬ್ಚಲನಗರ ಸಾಹಿಬ್ ಗುರುದ್ವಾರದಲ್ಲಿ ನಮನ ಸಲ್ಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶಕ್ಕೆ ತೆರಳುವ ಮುನ್ನ ಭಾನುವಾರ ತಮಿಳುನಾಡಿನ ವೆಲ್ಲೂರಿನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೇಂದ್ರ ಸರ್ಕಾರದ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಮೇ 30 ಮತ್ತು ಜೂನ್ 30 ರ ನಡುವೆ ಒಂದು ತಿಂಗಳ ಕಾಲ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವನ್ನು ಆಚರಿಸುತ್ತಿದೆ.
Advertisement