ರೋಜ್‌ಗಾರ್ ಮೇಳ: 70 ಸಾವಿರ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ, ಬಿಜೆಪಿ ಸರ್ಕಾರದ ಹೊಸ ಗುರುತು ಎಂದ ಮೋದಿ

ವಂಶಪಾರಂಪರಿಕ ರಾಜಕೀಯ ಪಕ್ಷಗಳು ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಉತ್ತೇಜಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಸುಮಾರು 70,000 ನೇಮಕಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು
ಸುಮಾರು 70,000 ನೇಮಕಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು
Updated on

ನವದೆಹಲಿ: ವಂಶಪಾರಂಪರಿಕ ರಾಜಕೀಯ ಪಕ್ಷಗಳು ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಉತ್ತೇಜಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾಗ್ದಾಳಿ ನಡೆಸಿದರು ಮತ್ತು ಅಂತಹ ಪಕ್ಷಗಳು ವಿವಿಧ ಹುದ್ದೆಗಳಿಗೆ ತಮ್ಮ 'ರೇಟ್ ಕಾರ್ಡ್' ಮೂಲಕ ಯುವಕರನ್ನು 'ಲೂಟಿ' ಮಾಡುತ್ತಿದ್ದು, ನಮ್ಮ ಸರ್ಕಾರ ಮಾತ್ರ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. 

70 ಸಾವಿರಕ್ಕೂ ಅಧಿಕ ಮಂದಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, 'ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಪ್ರೋತ್ಸಾಹಿಸುವ ಮೂಲಕ ವಂಶಪಾರಂಪರಿಕ ಪಕ್ಷಗಳು ಯುವಕರಿಗೆ ದ್ರೋಹ ಬಗೆದಿವೆ. ಈ ಹಿಂದೆ ನೇಮಕಾತಿ ಪ್ರಕ್ರಿಯೆಯು ಒಂದರಿಂದ ಒಂದೂವರೆ ವರ್ಷ ತೆಗೆದುಕೊಳ್ಳುತ್ತಿತ್ತು. ಆದರೆ, ಈಗ ಅದು ಪಾರದರ್ಶಕವಾಗಿ ಕೆಲವೇ ತಿಂಗಳಲ್ಲಿ ಮುಗಿಯುತ್ತದೆ' ಎಂದು ಅವರು ಹೇಳಿದರು.

'ವಂಶಪಾರಂಪರಿಕ ರಾಜಕೀಯ ಪಕ್ಷಗಳು ಎಲ್ಲಾ ವ್ಯವಸ್ಥೆಗಳಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಹೇಗೆ ಉತ್ತೇಜಿಸಿದವು ಎಂಬುದನ್ನು ನಾವು ನೋಡಿದ್ದೇವೆ. ಸರ್ಕಾರಿ ಉದ್ಯೋಗದ ವಿಷಯ ಬಂದಾಗಲೂ, ಈ ಪಕ್ಷಗಳು ಹೀಗೆಯೇ ನಡೆದುಕೊಂಡವು. ಈ ವಂಶಪಾರಂಪರಿಕ ಪಕ್ಷಗಳು ಕೋಟಿಗಟ್ಟಲೆ ಯುವಕರಿಗೆ ದ್ರೋಹ ಬಗೆದಿವೆ' ಎಂದು ಯಾವುದೇ ಪಕ್ಷದ ಹೆಸರೇಳದೆ ಹೇಳಿದರು.

2014ರಲ್ಲಿ ನಮ್ಮ ಸರ್ಕಾರ ಬಂದಾಗ, ಪಾರದರ್ಶಕತೆ ಬಂದಿತು. ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತವೂ ಅಂತ್ಯವಾಯಿತು. ದಶಕದ ಹಿಂದಿಗಿಂತ ಭಾರತವು ಈಗ ಹೆಚ್ಚು ಸ್ಥಿರ, ಸುರಕ್ಷಿತ ಮತ್ತು ಬಲಿಷ್ಠ ದೇಶವಾಗಿದೆ. ನಿರ್ಣಾಯಕತೆಯು ಭಾರತ ಸರ್ಕಾರದ ಗುರುತಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಹೊಸ ಉದ್ಯೋಗಾವಕಾಶಗಳಿವೆ. ಮುದ್ರಾ ಯೋಜನೆ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾದಂತಹ ಉಪಕ್ರಮಗಳೊಂದಿಗೆ ಸ್ವಯಂ ಉದ್ಯೋಗಾವಕಾಶಗಳೂ ಇವೆ ಎಂದು ಅವರು ಹೇಳಿದರು.

ಈ ಹಿಂದೆ ನಮ್ಮ ಆರ್ಥಿಕತೆಗೆ ಅಂತಹ ವಿಶ್ವಾಸ ಇರಲಿಲ್ಲ. ಒಂದೆಡೆ, ಸಾಂಕ್ರಾಮಿಕ ರೋಗದಿಂದಾಗಿ ನಿಧಾನಗತಿಯಿತ್ತು ಮತ್ತು ಮತ್ತೊಂದೆಡೆ, ಯುದ್ಧದ (ಉಕ್ರೇನ್) ಕಾರಣದಿಂದಾಗಿ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರಿತು. ಈ ಎಲ್ಲಾ ಸವಾಲುಗಳ ನಡುವೆಯೂ ಭಾರತ ತನ್ನ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ನಿರ್ಧಾರಗಳಿಂದ ಖಾಸಗಿ ವಲಯದಲ್ಲಿ ಲಕ್ಷಾಂತರ ಅವಕಾಶಗಳು ಲಭ್ಯವಾಗುವಂತಾಗಿದೆ. 'ರೋಜ್‌ಗಾರ್ ಮೇಳ' ಬಿಜೆಪಿ ಮತ್ತು ಎನ್‌ಡಿಎ ಸರ್ಕಾರಗಳ ಹೊಸ ಗುರುತಾಗಿದೆ. ರಾಜಕೀಯ ಭ್ರಷ್ಟಾಚಾರ, ಯೋಜನೆಗಳಲ್ಲಿನ ಅವ್ಯವಹಾರ, ಸಾರ್ವಜನಿಕ ಹಣ ದುರುಪಯೋಗ ಹಿಂದಿನ ಸರ್ಕಾರಗಳ ಗುರುತಾಗಿತ್ತು ಎಂದರು.

'ಆಜಾದಿ ಕಾ ಅಮೃತ್ ಕಾಲ್' ಪ್ರಾರಂಭವಾಗಿರುವುದರಿಂದ ಸರ್ಕಾರಿ ಕೆಲಸಗಳಿಗೆ ಕಾಲಿಡುವವರಿಗೆ ಇದು ಅತ್ಯಂತ ನಿರ್ಣಾಯಕ ಅವಧಿಯಾಗಿದೆ. ಇಲ್ಲಿನ ಹೊಸ ನೇಮಕಾತಿಗಳು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿವೆ' ಎಂದು ಮೋದಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com