ಇನ್ನೂ ನಿಂತಿಲ್ಲ ಹಿಂಸಾಚಾರ... ಮಣಿಪುರವನ್ನು ಲೆಬನಾನ್, ಸಿರಿಯಾ ಜೊತೆಗೆ ಹೋಲಿಸಿದ ನಿವೃತ್ತ ಸೇನಾಧಿಕಾರಿ
ಇಂಫಾಲ: ಒಂದೂವರೆ ತಿಂಗಳು ಕಳೆದರೂ ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಂದಿಲ್ಲ. ಈ ನಡುವಲ್ಲೇ ನಿವೃತ್ತ ಸೇನಾಧಿಕಾರಿಯೊಬ್ಬರು ಮಣಿಪುರವನ್ನು ಯುದ್ಧಪೀಡಿತ ಲಿಬಿಯಾ, ಲೆಬನಾನ್ ಮತ್ತು ಸಿರಿಯಾಗಳೊಂದಿಗೆ ಹೋಲಿಕೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಲ್ ನಿಶಿಕಾಂತ್ ಸಿಂಗ್ ಅವರು, ನಿವೃತ್ತ ಜೀವನ ನಡೆಸುತ್ತಿರುವ ನಾನು ಮಣಿಪುರದ ಸರಳ ಭಾರತೀಯ. ರಾಜ್ಯ ಈಗ ‘ರಾಜ್ಯರಹಿತ’ವಾಗಿದೆ. ಲಿಬಿಯಾ, ಲೆಬನಾನ್, ನೈಜೀರಿಯಾ, ಸಿರಿಯಾದಲ್ಲಿ ನಡೆಯುತ್ತಿರುವಂತೆ ಇಲ್ಲಿ ಸಹ ಜೀವ ಮತ್ತು ಆಸ್ತಿಯನ್ನು ಯಾರು ಬೇಕಾದರೂ, ಯಾವಾಗ ಬೇಕಾದರೂ ನಾಶಪಡಿಸಬಹುದು. ಮಣಿಪುರವನ್ನು ತನ್ನ ರಸದಲ್ಲಿಯೇ ಕರಗಿಸಲು ಬಿಟ್ಟಂತೆ ತೋರುತ್ತಿದೆ. ಈ ಬಗ್ಗೆ ಯಾರಾದರೂ ಕೇಳುತ್ತಿದ್ದೀರಾ? ಎಂದು ಟ್ವೀಟ್ ಮಾಡಿದ್ದಾರೆ.
ಲೆಫ್ಟಿನೆಂಟ್ ಜನರಲ್ ಒಬ್ಬರು ಮಾಡಿರುವ ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ನಿಶಿಕಾಂತ್ ಸಿಂಗ್ ಅವರ ಈ ಟ್ವೀಟ್ ನ್ನು ಇನ್ನು ಮಾಜಿ ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಅವರು, ಮರು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಮಣಿಪುರದ ನಿವೃತ್ತ ಲೆಫ್ಟಿನೆಂಟ್ ಜನರಲ್ ಅವರ ನೋವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ, ಟ್ವೀಟ್‌ನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಟ್ಯಾಗ್ ಮಾಡಿ ‘ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ತಕ್ಷಣ ಗಮನ ಹರಿಸಬೇಕಾಗಿದೆ’ ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ