ಸಂಸತ್ ಅಧಿವೇಶನಕ್ಕೂ ಮುನ್ನ ದೆಹಲಿ ಸುಗ್ರೀವಾಜ್ಞೆ ಕುರಿತು ನಿರ್ಧಾರ: ಮಲ್ಲಿಕಾರ್ಜುನ ಖರ್ಗೆ

ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸುವ ಬಗ್ಗೆ ಸಂಸತ್ತಿನ ಅಧಿವೇಶನದ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣಕ್ಕೆ ಕೇಂದ್ರದ ಸುಗ್ರೀವಾಜ್ಞೆಯನ್ನು ವಿರೋಧಿಸುವ ಬಗ್ಗೆ ಸಂಸತ್ತಿನ ಅಧಿವೇಶನದ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ಬೆಂಬಲದ ಭರವಸೆ ನೀಡದಿದ್ದರೆ ಪಾಟ್ನಾದಲ್ಲಿ ನಡೆಯುವ ಪ್ರತಿಪಕ್ಷಗಳ ಸಭೆಯಿಂದ ಹೊರನಡೆಯುವುದಾಗಿ ಎಎಪಿ ತಿಳಿಸಿರುವುದಾಗಿ ಮೂಲಗಳು ತಿಳಿಸಿದ ನಂತರ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

ಇಂದು ಬೆಳಗ್ಗೆ ಪಾಟ್ನಾಗೆ ತೆರಳುವ ಮುನ್ನ ಸುಗ್ರೀವಾಜ್ಞೆ ಮತ್ತು ಎಎಪಿಯ ಅಂತಿಮ ಸೂಚನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಸಂಸತ್ತಿನ ಮುಂಗಾರು ಅಧಿವೇಶನದ ಮೊದಲು ತಮ್ಮ ಪಕ್ಷವು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ಅದು ಸಂಸತ್ತಿಗೆ ಸಂಬಂಧಿಸಿದ ವಿಷಯವಾಗಿರುವಾಗ ಬೇರೆಡೆ ಏಕೆ ಮಾತನಾಡಲಾಗುತ್ತಿದೆ ಎಂಬ ಬಗ್ಗೆ ಆಶ್ಚರ್ಯವಾಗಿದೆ ಎಂದರು.

'ಸುಗ್ರೀವಾಜ್ಞೆಯನ್ನು ವಿರೋಧಿಸುವುದು ಅಥವಾ ಬೆಂಬಲ ವ್ಯಕ್ತಪಡಿಸುವುದು ಹೊರಗೆ ನಡೆಯುವುದಿಲ್ಲ, ಸಂಸತ್ತಿನಲ್ಲಿ ನಡೆಯುತ್ತದೆ. ಸಂಸತ್ತು ಪ್ರಾರಂಭವಾಗುವ ಮೊದಲು, ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಾದ ವಿಷಯಗಳ ಬಗ್ಗೆ ನಿರ್ಧರಿಸುತ್ತವೆ. ಇದು ಅವರಿಗೆ (ಎಎಪಿ) ತಿಳಿದಿದೆ ಮತ್ತು ಅವರ ನಾಯಕರು ಕೂಡ ನಮ್ಮ ಸರ್ವಪಕ್ಷ ಸಭೆಗಳಿಗೆ ಬರುತ್ತಾರೆ. ಅದರ ಬಗ್ಗೆ ಹೊರಗೆ ಯಾಕೆ ಪ್ರಚಾರ ಮಾಡಲಾಗುತ್ತಿದೆಯೋ ಗೊತ್ತಿಲ್ಲ' ಎಂದು ಖರ್ಗೆ ಹೇಳಿದರು.

'ಸುಮಾರು 18-20 ಪಕ್ಷಗಳು ಯಾವುದನ್ನು ವಿರೋಧಿಸಬೇಕು ಮತ್ತು ಯಾವುದನ್ನು ಒಪ್ಪಿಕೊಳ್ಳಬೇಕು ಎಂದು ಒಟ್ಟಾಗಿ ನಿರ್ಧರಿಸುತ್ತವೆ. ಹಾಗಾಗಿ ಈಗಲೇ ಏನನ್ನೂ ಹೇಳುವ ಬದಲು ಸಂಸತ್ತು ಆರಂಭವಾಗುವ ಮುನ್ನವೇ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದರು.

2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಎದುರಿಸಲು ಜಂಟಿ ಕಾರ್ಯತಂತ್ರವನ್ನು ರೂಪಿಸಲು ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳ ಸಭೆಯನ್ನು ಕರೆದಿದ್ದಾರೆ.

ಸುಗ್ರೀವಾಜ್ಞೆಗೆ ಕಾಂಗ್ರೆಸ್ ಬೆಂಬಲ ನೀಡದಿದ್ದಲ್ಲಿ ಎಎಪಿ ವಿಪಕ್ಷಗಳ ಸಭೆಯಿಂದ ಹೊರನಡೆಯಲಿದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪಾಟ್ನಾದಲ್ಲಿ ನಡೆದ ಬಿಜೆಪಿಯೇತರ ಪಕ್ಷಗಳ ಸಭೆಯಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣದ ಕುರಿತು ಕೇಂದ್ರದ ಸುಗ್ರೀವಾಜ್ಞೆ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಟಿಎಂಸಿ), ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ (ಎಎಪಿ), ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ (ಡಿಎಂಕೆ), ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (ಶಿವಸೇನೆ-ಯುಬಿಟಿ) ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com