ಮಸೀದಿಗೆ ಪ್ರವೇಶಿಸಿದ ಸೇನೆಯ ವ್ಯಕ್ತಿಗಳು, 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಮುಸ್ಲಿಮರಿಗೆ ಒತ್ತಾಯ: ಮೆಹಬೂಬಾ ಮುಫ್ತಿ

ಶನಿವಾರ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮಸೀದಿಯೊಂದಕ್ಕೆ ಭಾರತೀಯ ಸೇನೆಯ ಕೆಲವು ವ್ಯಕ್ತಿಗಳು ನುಗ್ಗಿ ಮುಸ್ಲಿಮರನ್ನು 'ಜೈ ಶ್ರೀ ರಾಮ್' ಎಂದು ಕೂಗುವಂತೆ ಒತ್ತಾಯಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ

ನವದೆಹಲಿ: ಶನಿವಾರ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮಸೀದಿಯೊಂದಕ್ಕೆ ಭಾರತೀಯ ಸೇನೆಯ ಕೆಲವು ವ್ಯಕ್ತಿಗಳು ನುಗ್ಗಿ ಮುಸ್ಲಿಮರನ್ನು 'ಜೈ ಶ್ರೀ ರಾಮ್' ಎಂದು ಕೂಗುವಂತೆ ಒತ್ತಾಯಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

'50 ಆರ್‌ಆರ್‌ನ ಸೇನಾ ಪಡೆಗಳು ಪುಲ್ವಾಮಾದಲ್ಲಿ ಮಸೀದಿಯೊಂದಕ್ಕೆ ನುಗ್ಗಿದ ಮತ್ತು ಒಳಗೆ ಮುಸ್ಲಿಮರನ್ನು 'ಜೈ ಶ್ರೀ ರಾಮ್' ಎಂದು ಕೂಗುವಂತೆ ಒತ್ತಾಯಿಸಿದ ಬಗ್ಗೆ ಕೇಳಿ ಆಘಾತವಾಯಿತು' ಎಂದು ಮೆಹಬೂಬಾ ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಅವರು ಇಲ್ಲಿರುವಾಗ ಮತ್ತು ಅದು ಕೂಡ ಯಾತ್ರೆಯ ಸಮಯದಲ್ಲೇ ಇಂತಹ ಘಟನೆ ನಡೆದಿರುವುದು ಕೇವಲ ಪ್ರಚೋದನೆಯ ಕ್ರಿಯೆಯಾಗಿದೆ. ತಕ್ಷಣವೇ ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರನ್ನು ವಿನಂತಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು ಇತ್ತೀಚೆಗೆ ಶ್ರೀನಗರ ಮೂಲದ ಸೇನೆಯ 15 ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ (GoC) ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಪುಲ್ವಾಮಾದ ಮಸೀದಿಗೆ ಭಾರತೀಯ ಸೇನಾ ಸಿಬ್ಬಂದಿ ಪ್ರವೇಶಿಸಿದ ವರದಿಗಳು ತೀವ್ರ ದುಃಖ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

'ಅವರು ಮಸೀದಿಗೆ ಪ್ರವೇಶಿಸಿದ್ದು ಸರಿಯಲ್ಲ. ಅಲ್ಲದೆ, ಸ್ಥಳೀಯರು ವರದಿ ಮಾಡಿದಂತೆ 'ಜೈ ಶ್ರೀ ರಾಮ್'ನಂತಹ ಘೋಷಣೆಗಳನ್ನು ಕೂಗಲು ಜನರನ್ನು ಒತ್ತಾಯಿಸುವುದು ಸ್ವೀಕಾರಾರ್ಹವಲ್ಲ. ಈ ವರದಿಗಳನ್ನು ಸಮಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿ ತನಿಖೆ ಮಾಡಲು ರಾಜನಾಥ್ ಸಿಂಗ್ ಅವರು ಸೂಚನೆಗಳನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಒಮರ್ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೆಹಬೂಬಾ ಮತ್ತು ಒಮರ್ ಮಾಡಿರುವ ಆರೋಪಗಳ ಬಗ್ಗೆ ಸೇನೆಯಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಶುಕ್ರವಾರ (ಜೂನ್ 23) ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆದ ಒಂದು ದಿನದ ನಂತರ ಈ ಘಟನೆ ಕುರಿತು ಟ್ವೀಟ್ ಮಾಡಲಾಗಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಹೋರಾಡಲು ಮತ್ತು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಲು ಶುಕ್ರವಾರ 17 ವಿರೋಧ ಪಕ್ಷಗಳು ನಿರ್ಧರಿಸಿವೆ ಮತ್ತು ಜಂಟಿ ಕಾರ್ಯತಂತ್ರವನ್ನು ರೂಪಿಸಲು ಮುಂದಿನ ತಿಂಗಳು ಶಿಮ್ಲಾದಲ್ಲಿ ಸಭೆ ಸೇರಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com