ಅಸ್ಸಾಂ ಪ್ರವಾಹ: ಸಿಎಂ ಹಿಮಂತ್ ಬಿಸ್ವಾ ಶರ್ಮಾರೊಂದಿಗೆ ಅಮಿತ್ ಶಾ ಮಾತುಕತೆ, ಅಗತ್ಯ ನೆರವು ನೀಡುವ ಭರವಸೆ

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ತೀವ್ರವಾಗಿರುವುದರಿಂದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ತೀವ್ರವಾಗಿರುವುದರಿಂದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಸಾಧ್ಯವಿರುವ ಎಲ್ಲ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಸ್ಸಾಂ ಜನತೆಯ ಕಷ್ಟಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೃಢವಾಗಿ ನಿಂತಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

'ಭಾರಿ ಮಳೆಯಿಂದಾಗಿ ಅಸ್ಸಾಂನ ಕೆಲವು ಭಾಗಗಳಲ್ಲಿ ಜನರು ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಾನು ಸಿಎಂ ಹಿಮಂತ್ ಬಿಸ್ವಾ ಜಿ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಸಾಧ್ಯವಿರುವ ಎಲ್ಲ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದೇನೆ. ಎನ್‌ಡಿಆರ್‌ಎಫ್ ತಂಡಗಳು ಈಗಾಗಲೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಸಾಕಷ್ಟು ಪಡೆಗಳು ಸನ್ನದ್ಧ ಸ್ಥಿತಿಯಲ್ಲಿವೆ. ಈ ಕಷ್ಟದ ಸಮಯದಲ್ಲಿ ಅಸ್ಸಾಂನ ಜನರೊಂದಿಗೆ ಯಾವಾಗಲೂ ಇದ್ದಂತೆ ಮೋದಿ ಸರ್ಕಾರವು ದೃಢವಾಗಿ ನಿಂತಿದೆ' ಎಂದು ಶಾ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಶರ್ಮಾ, ಅಸ್ಸಾಂನ ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ಗೃಹ ಸಚಿವರ ಪೂರ್ವಭಾವಿ ಪ್ರತಿಕ್ರಿಯೆ ಮತ್ತು ಕಾಳಜಿಗೆ ಕೃತಜ್ಞತೆ ವ್ಯಕ್ತಪಡಿಸಿದರು.

'ಅಸ್ಸಾಂನ ಪ್ರವಾಹ ಪರಿಸ್ಥಿತಿಯ ಬಗ್ಗೆ ನಿಮ್ಮ ಪೂರ್ವಭಾವಿ ಪ್ರತಿಕ್ರಿಯೆ ಮತ್ತು ಕಾಳಜಿಗಾಗಿ ಗೌರವಾನ್ವಿತ ಗೃಹ ಸಚಿವರಿಗೆ ಕೃತಜ್ಞತೆ. ಅಸ್ಸಾಂ ಸರ್ಕಾರವು ಹೆಚ್ಚು ಜಾಗರೂಕವಾಗಿದೆ ಮತ್ತು ಸಂತ್ರಸ್ತರಿಗೆ ಎಲ್ಲಾ ನೆರವು ನೀಡುತ್ತಿದೆ. ಭಾರತ ಸರ್ಕಾರದಿಂದ ರಾಜ್ಯಕ್ಕೆ ಅಗತ್ಯವಿರುವ ಎಲ್ಲಾ ಸಹಾಯಕ್ಕಾಗಿ ನಾವು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಕೃತಜ್ಞರಾಗಿರುತ್ತೇವೆ' ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಈಮಧ್ಯೆ, ಅಸ್ಸಾಂನಲ್ಲಿನ ಪ್ರವಾಹ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೆ, 15 ಜಿಲ್ಲೆಗಳಲ್ಲಿ ಸುಮಾರು 4.01 ಲಕ್ಷ ಜನರು ಇನ್ನೂ ಪ್ರವಾಹದಿಂದಾಗಿ ತೊಂದರೆಗೊಳಗಾಗಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.

ಎಎಸ್‌ಡಿಎಂಎದ ಪ್ರವಾಹ ವರದಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಪ್ರವಾಹದ ನೀರಿನಲ್ಲಿ ಮುಳುಗಿ ನಲಾಬ್ರಿ ಜಿಲ್ಲೆಯಲ್ಲಿ ಇನ್ನೂ ಒಬ್ಬರು ಸಾವಿಗೀಡಾಗಿದ್ದಾರೆ. ಈ ಮೂಲಕ ಈವರೆಗೆ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

'ಬಜಾಲಿ ಜಿಲ್ಲೆಯಲ್ಲಿಯೇ ಸುಮಾರು 2.22 ಲಕ್ಷ ಜನರು, ಬಾರ್ಪೇಟಾದಲ್ಲಿ 1.04 ಲಕ್ಷ ಜನರು, ನಲ್ಬರಿಯಲ್ಲಿ 40,668 ಜನರು, ಲಖಿಂಪುರದಲ್ಲಿ 22,060 ಜನರು, ದರ್ರಾಂಗ್‌ನಲ್ಲಿ 8,493 ಜನರು ಮತ್ತು ಗೋಲ್‌ಪಾರಾ ಜಿಲ್ಲೆಯಲ್ಲಿ 4,750 ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ' ಎಂದು ಎಎಸ್‌ಡಿಎಂಎ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com