ಮಹಾರಾಷ್ಟ್ರ: ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದಾನೆಂದು ಶಂಕಿಸಿ ವ್ಯಕ್ತಿಯ ಹತ್ಯೆ, 11 ಮಂದಿ ಬಂಧನ

ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂದು ಶಂಕಿಸಿ ಗೋರಕ್ಷಕರ ಗುಂಪೊಂದು ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಮುಂಬೈ: ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂದು ಶಂಕಿಸಿ ಗೋರಕ್ಷಕರ ಗುಂಪೊಂದು ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ.

ಮುಂಬೈನ ಕುರ್ಲಾದ ಅಫಾನ್ ಅನ್ಸಾರಿ (32) ಕೊಲೆಯಾದ ವ್ಯಕ್ತಿ. ಅನ್ಸಾರಿ ತನ್ನ ಸಹಾಯಕ ನಾಸಿರ್ ಶೇಖ್ ಜೊತೆ ಕಾರಿನಲ್ಲಿ ಮಾಂಸವನ್ನು ಸಾಗಿಸುತ್ತಿದ್ದಾಗ ಗೋರಕ್ಷಕರು ಅವರನ್ನು ಅಡ್ಡಗಟ್ಟಿ ಥಳಿಸಿದ್ದಾರೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅನ್ಸಾರಿ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಕೂಡ ಗೋರಕ್ಷಕರು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದರು. ಘಟನೆ ನಡೆದ 2 ವಾರಗಳ ನಡುವಲ್ಲೇ ಮತ್ತೊಂದು ಘಟನೆ ವರದಿಯಾಗಿದೆ.

ಮುಂಬೈನಿಂದ 150 ಕಿಮೀ ದೂರದಲ್ಲಿರುವ ನಾಸಿಕ್‌ನ ಇಗತ್‌ಪುರಿ ಪ್ರದೇಶದ ಘೋಟಿ-ಸಿನ್ನಾರ್ ರಸ್ತೆಯ ಬಳಿ ಶನಿವಾರ ಸಂಜೆ 5.30 ರ ಸುಮಾರಿಗೆ ಘಟನೆ ನಡೆದಿದ್ದು, ಪ್ರಕರಣ ಸಂಬಂಧ 11 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ಮಾಂಸ ಸಾಗಿಸುತ್ತಿದ್ದ ಮುಂಬೈನ ಕುರ್ಲಾ ಪ್ರದೇಶದ ಇಬ್ಬರು ವ್ಯಕ್ತಿಗಳ ಮೇಲೆ 10 ರಿಂದ 15 ಗೋರಕ್ಷಕರ ಗುಂಪು ರಾಡ್ ಮತ್ತು ಮರದ ಕೋಲುಗಳಿಂದ ಹಲ್ಲೆ ನಡೆಸಿದೆ. ಘಟನೆಯಲ್ಲಿ ಅಫಾನ್ ಅನ್ಸಾರಿ (32) ಮತ್ತು ಆತನ ಸಹಾಯಕ ನಾಸಿರ್ ಖುರೇಷಿ (24) ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿಸಿದ್ದಾರೆ.

ಗಾಯಗೊಂಡ ಇಬ್ಬರನ್ನೂ ಧಾಮಂಗಾವ್ ಪ್ರದೇಶದ ಎಸ್‌ಎಂಬಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅನ್ಸಾರಿ ಮೃತಪಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಖುರೇಷಿ ಅವರು ನೀಡಿದ ದೂರಿನ ಆಧಾರದ ಮೇಲೆ 11 ಮಂದಿಯನ್ನು ಬಂಧಿಸಲಾಗಿದೆ. ಇವರ ವಿರುದ್ಧ ಕೊಲೆ ಆರೋಪದ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ಸಾಗಿಸುತ್ತಿದ್ದ ಮಾಂಸದ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com