
ನವದೆಹಲಿ: ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ನೀಲನಕ್ಷೆಯೊಂದನ್ನು ಅಂತಿಮಗೊಳಿಸುತ್ತಿದ್ದು, ಸಮಗ್ರ ನಿರ್ವಹಣಾ ಆಧಾರಿತ ಕಾರ್ಯತಂತ್ರ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ,ಶೀಘ್ರದಲ್ಲೇ ಇತರ ಉನ್ನತ ನಾಯಕರೊಂದಿಗೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳು ಮತ್ತು ಉಪ ಮುಖ್ಯಮಂತ್ರಿಗಳು ಮತ್ತು ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರು ಸೇರಿದಂತೆ ನಾಯಕರೊಂದಿಗೆ ಸರಣಿ ಸಮಾಲೋಚನಾ ಸಭೆಗಳನ್ನು ನಡೆಸಲಿದ್ದಾರೆ.
“ಪಕ್ಷದ ಪ್ರಮುಖ ತಂತ್ರಜ್ಞ ಅಮಿತ್ ಶಾ, ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಪ್ರಮುಖ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಚಿಂತಕರ ಚಾವಡಿಯು ಎಲ್ಲಾ 543 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ದೇಶವನ್ನು ದಕ್ಷಿಣ, ಉತ್ತರ ಮತ್ತು ಪೂರ್ವ ಎಂದು ಮೂರು ಪ್ರದೇಶಗಳಾಗಿ ವಿಂಗಡಿಸಿದೆ. ಬೂತ್‌ಗಳ ಸೂಕ್ಷ್ಮ ನಿರ್ವಹಣೆಯಲ್ಲಿ ದಕ್ಷಿಣ ವಲಯದ ಎಲ್ಲಾ 129 ಲೋಕಸಭಾ ಕ್ಷೇತ್ರಗಳು ತೆಲಂಗಾಣ (17) ಕೇರಳ (20) ತಮಿಳುನಾಡು (39) ಕರ್ನಾಟಕ (28) ಮತ್ತು ಆಂಧ್ರಪ್ರದೇಶ (25 ಲೋಕಸಭಾ ಸ್ಥಾನಗಳು) ಒಳಗೊಂಡಿದ್ದು, ಕನಿಷ್ಠ 80 ರಿಂದ 95 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ.
ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ 42 ಸ್ಥಾನಗಳು ಮತ್ತು ಅಸ್ಸಾಂನಲ್ಲಿ 14 ಸ್ಥಾನಗಳು ಪೂರ್ವ ಭಾರತ ಯೋಜನೆಯಡಿಯಲ್ಲಿವೆ. ರಾಜ್ಯಗಳ ಪಕ್ಷದ ಉಸ್ತುವಾರಿ, ರಾಜ್ಯಾಧ್ಯಕ್ಷರು, ಹಿರಿಯ ಪದಾಧಿಕಾರಿಗಳು ಮತ್ತು ಏಳು ಮೋರ್ಚಾಗಳೊಂದಿಗೆ ಸಭೆ ನಡೆಸಲಿರುವ ಜೆ. ಪಿ. ನಡ್ಡಾ, ಮುಂಬರುವ ಲೋಕಸಭಾ ಚುನಾವಣೆಯನ್ನು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎಂಬುದರ ಬಗ್ಗೆ ವ್ಯಾಪಕವಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ವಿಧಾನಸಭಾ ಚುನಾವಣಾ ಸೋಲಿನ ನಂತರ, ಬಿಜೆಪಿಯು ತನ್ನ ಸಾಮಾಜಿಕ ಮತ್ತು ಧರ್ಮಾಧಾರಿತ ಅಂಶಗಳನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ದಕ್ಷಿಣ ಭಾರತದ ರಾಜ್ಯಗಳಿಗೆ ಹೊಸ ತಂತ್ರವನ್ನು ರೂಪಿಸಿದೆ ಎಂದು ತಿಳಿದುಬಂದಿದೆ.
Advertisement