ಭಾರತ 'ಹಿಂದೂ ಬೆಳವಣಿಗೆಯ ದರ' ಅಪಾಯಕಾರಿ ಮಟ್ಟಕ್ಕೆ ಹತ್ತಿರದಲ್ಲಿದೆ: ರಘುರಾಮ್ ರಾಜನ್ ಆತಂಕ; ಏನಿದು 'ಹಿಂದೂ ಬೆಳವಣಿಗೆಯ ದರ'?

ಭಾರತೀಯ ಆರ್ಥಿಕತೆ 'ಹಿಂದೂ ಬೆಳವಣಿಗೆಯ ದರ' ಅಪಾಯಕಾರಿ ಮಟ್ಟಕ್ಕೆ ಹತ್ತಿರದಲ್ಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಮತ್ತು ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದು, ಇಷ್ಟಕ್ಕೂ ಏನಿದು 'ಹಿಂದೂ ಬೆಳವಣಿಗೆಯ ದರ'?
ರಘುರಾಮ್ ರಾಜನ್
ರಘುರಾಮ್ ರಾಜನ್
Updated on

ನವದೆಹಲಿ: ಭಾರತೀಯ ಆರ್ಥಿಕತೆ 'ಹಿಂದೂ ಬೆಳವಣಿಗೆಯ ದರ' ಅಪಾಯಕಾರಿ ಮಟ್ಟಕ್ಕೆ ಹತ್ತಿರದಲ್ಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಮತ್ತು ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದು, ಇಷ್ಟಕ್ಕೂ ಏನಿದು 'ಹಿಂದೂ ಬೆಳವಣಿಗೆಯ ದರ'?

ಹೌದು.. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ಮತ್ತು ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ 'ಹಿಂದೂ ಬೆಳವಣಿಗೆಯ ದರ'ದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ದುರ್ಬಲ ಖಾಸಗಿ ವಲಯದ ಹೂಡಿಕೆ, ಹೆಚ್ಚಿನ ಬಡ್ಡಿದರ ಮತ್ತು ನಿಧಾನಗತಿಯ ಜಾಗತಿಕ ಬೆಳವಣಿಗೆ ದರಗಳಿಂದಾಗಿ ಭಾರತೀಯ ಆರ್ಥಿಕತೆಯು ಹಿಂದೂ ಬೆಳವಣಿಗೆಯ ದರಕ್ಕೆ ಅಪಾಯಕಾರಿಯಾಗಿ ಹತ್ತಿರದಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ರಾಷ್ಟ್ರೀಯ ಆದಾಯದ ಇತ್ತೀಚಿನ ಅಂದಾಜುಗಳು, ತ್ರೈಮಾಸಿಕ ಬೆಳವಣಿಗೆಯಲ್ಲಿ ನಿರಂತರ ಕುಸಿತವು ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಕಾಳಜಿಯ ವಿಷಯವಾಗಿದೆ ಎಂದು ಅವರು ಹೇಳಿದರು. ಅಂಕಿಅಂಶಗಳ ಪ್ರಕಾರ, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಎರಡನೇ ತ್ರೈಮಾಸಿಕದಲ್ಲಿ ಶೇ 6.3 ಮತ್ತು ಮೊದಲ ತ್ರೈಮಾಸಿಕದಲ್ಲಿ ಶೇ 13.2 ರಿಂದ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 4.4 ಕ್ಕೆ ಕುಸಿದಿದೆ. ಆದರೆ, ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬೆಳವಣಿಗೆ ದರವು ಶೇ 5.2 ರಷ್ಟಿತ್ತು.

ಅನುಕ್ರಮ ನಿಧಾನಗತಿಯ ಕಾಳಜಿ
ಈ ಅಂಕಿಅಂಶಗಳಿಗೆ ಸಂಬಂದಿಸಿದಂತೆ ಕಳವಳ ವ್ಯಕ್ತಪಡಿಸಿರುವ ರಘುರಾಮ್ ರಾಜನ್, 'ಅನುಕ್ರಮವಾದ ನಿಧಾನಗತಿಯು ಕಳವಳಕಾರಿ ವಿಷಯವಾಗಿದೆ. ಖಾಸಗಿ ವಲಯವು ಹೂಡಿಕೆ ಮಾಡಲು ಹಿಂಜರಿಯುತ್ತಿದೆ, ಆರ್‌ಬಿಐ ಇನ್ನೂ ದರಗಳನ್ನು ಹೆಚ್ಚಿಸುತ್ತಿದೆ ಮತ್ತು ಜಾಗತಿಕ ಬೆಳವಣಿಗೆಯು ಈ ವರ್ಷ ನಿಧಾನವಾಗುವ ಸಾಧ್ಯತೆಯಿದೆ. ಇದೆಲ್ಲದರಲ್ಲೂ ಹೆಚ್ಚುವರಿ ಬೆಳವಣಿಗೆ ದರ ಎಲ್ಲಿ ಸಿಗುತ್ತದೆಯೋ ಗೊತ್ತಿಲ್ಲ. 2023-24ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆ ದರ ಹೇಗಿರುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಶೇ. ಐದರಷ್ಟು ಪ್ರಗತಿ ಸಾಧಿಸಿದರೂ ಅದೃಷ್ಟ ಖುಲಾಯಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಷ್ಟಕ್ಕೂ 'ಹಿಂದೂ ಬೆಳವಣಿಗೆ ದರ' ಎಂದರೇನು?
1947ರಲ್ಲಿ ದೇಶ ಸ್ವತಂತ್ರವಾದಾಗ ದೇಶ ಆರ್ಥಿಕವಾಗಿ ತೀರಾ ಹಿಂದುಳಿದಿತ್ತು. ದೇಶದಲ್ಲಿ ವ್ಯಾಪಕ ಬಡತನ ಮತ್ತು ಸಂಪನ್ಮೂಲಗಳ ಕೊರತೆ ಇತ್ತು. ಅಂತಹ ಪರಿಸ್ಥಿತಿಯಲ್ಲಿ, 1951 ರಿಂದ 1980 ರವರೆಗೆ, ದೇಶದ ಬೆಳವಣಿಗೆಯ ದರವು ಸುಮಾರು ಮೂರು ದಶಕಗಳ ಕಾಲ ಬಹಳ ನಿಧಾನವಾಗಿತ್ತು. ದೇಶದ ಸರಾಸರಿ ಬೆಳವಣಿಗೆ ದರವು ಸುಮಾರು ನಾಲ್ಕು ಪ್ರತಿಶತದಷ್ಟಿತ್ತು. ಇಂತಹ ಪರಿಸ್ಥಿತಿಯಲ್ಲಿ ಆ ಕಾಲದ ಖ್ಯಾತ ಅರ್ಥಶಾಸ್ತ್ರಜ್ಞ ರಾಜ್ ಕೃಷ್ಣ ಅವರು 1978ರಲ್ಲಿ ನಿಧಾನಗತಿಯ ಬೆಳವಣಿಗೆ ದರವನ್ನು ‘ಹಿಂದೂ ಬೆಳವಣಿಗೆ ದರ’ ಎಂದು ಹೆಸರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com