
ರಾಯಪುರ: ಛತ್ತೀಸ್‌ಗಢದ ರತನ್‌ಪುರದ ಜಾಂಕಿ ಬಾಯಿ ಬಿಜ್ವಾರ್ ಅವರಿಗೆ ವಿಶೇಷವಾಗಿ ಹುಂಜಗಳೆಂದರೆ ತುಂಬಾ ಪ್ರೀತಿ. ಆ ಪ್ರೀತಿ ಎಷ್ಟು ಪ್ರಬಲವಾಗಿದೆಯೆಂದರೆ, ತನ್ನ ನೆರೆಹೊರೆಯವರು ಕೋಳಿಗಳನ್ನು ಕಳ್ಳತನ ಮಾಡುವುದರಿಂದಾಗಿ ತಾನು ಸಾಕಿರುವ ಹುಂಜಗಳಿಗೆ ಪೊಲೀಸ್ ರಕ್ಷಣೆಯನ್ನು ಕೋರಿದ್ದಾರೆ.
ರಾಯ್‌ಪುರದಿಂದ ಪೂರ್ವಕ್ಕೆ 130 ಕಿಮೀ ದೂರದಲ್ಲಿರುವ ಬಿಲಾಸ್‌ಪುರದ ರತನ್‌ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಜಾಂಕಿ ಲಿಖಿತ ದೂರು ದಾಖಲಿಸಿದ್ದು, ತನ್ನ ಕುಟುಂಬವು ಕೋಳಿಗಳನ್ನು ಪ್ರೀತಿಯಿಂದ ಸಾಕುತ್ತಿದೆ ಎಂದು ವಿವರಿಸಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ, ನನ್ನ ನೆರೆಹೊರೆಯವರಾದ ಬುಗಲ್ ಮತ್ತು ದುರ್ಗಾ ಎಂಬುವವರು ದುರುದ್ದೇಶಪೂರಿತ ಮನಸ್ಥಿತಿಯೊಂದಿಗೆ ತಾನು ಸಾಕಿದ್ದ ಹುಂಜವನ್ನು ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದಾರೆ. 'ಒಮ್ಮೆ, ಎರಡು ಕೆಜಿ ತೂಕದ ನನ್ನ ಕಂದು ಬಣ್ಣದ ಹುಂಜವನ್ನು ತಿನ್ನಲು ತೆಗೆದುಕೊಂಡು ಹೋಗುವುದನ್ನು ನೋಡಿದೆ' ಎಂದು ದೂರಿದ್ದಾರೆ.
'ನಾನು ಅವರ ಮನೆಗೆ ಧಾವಿಸಿದೆ. ಕೋಳಿಯನ್ನು ಹಿಂತಿರುಗಿಸಲು ಅವರೊಂದಿಗೆ ಜಗಳವಾಡಬೇಕಾಯಿತು. ಕೋಳಿ ಗಂಭೀರವಾಗಿ ಗಾಯಗೊಂಡಿರುವುದನ್ನು ನೋಡಿ ನನಗೆ ಆಘಾತವಾಯಿತು. ನನಗೆ ತುಂಬಾ ನೋವಾಗಿದೆ ಮತ್ತು ತಕ್ಷಣ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ' ಎಂದು ಅವರು ಹೇಳಿದರು.
ಮೊದಲು ಎರಡು ನೆರೆಹೊರೆಯವರ ನಡುವಿನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇವೆ. ಮತ್ತು ಅವರು ಮಾತುಕತೆಗೆ ಸಿದ್ಧರಿಲ್ಲದಿದ್ದರೆ, ನಾವು ಕೆಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಯೋಚಿಸುತ್ತೇವೆ ಎಂದು ರತನ್‌ಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.
Advertisement