
ನವದೆಹಲಿ: ದೆಹಲಿ ಅಬಕಾರಿ ನೀತಿ 2021-22ರಲ್ಲಿ ಕಿಕ್ ಬ್ಯಾಕ್ ಹಣ ಪಡೆದು ಕೆಲವರಿಗೆ ಅನುಕೂಲವಾಗುವಂತೆ ನೀತಿ ರೂಪಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರನ್ನು ಇಡಿ ಇದೇ ಮೊದಲ ಬಾರಿಗೆ ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸಲಿದೆ.
ದೆಹಲಿ ಅಬಕಾರಿ ನೀತಿಯಿಂದ ಲಾಭ ಪಡೆದ ಮದ್ಯದ ವ್ಯಾಪಾರಿಗಳು,ರಾಜಕಾರಣಿಗಳು, ಸರ್ಕಾರಿ ನೌಕರರು ಮತ್ತು ಮಧ್ಯವರ್ತಿಗಳಿಗೆ ಲಂಚವಾಗಿ ಹಣ ನೀಡಿದ್ದಾರೆ ಎನ್ನುವ ಆರೋಪವಿದೆ. ಅಲ್ಲದೆ, ಕಿಕ್ ಬ್ಯಾಕ್ ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿರುವ ಮತ್ತೋರ್ವ ಉದ್ಯಮಿ ಉದ್ಯಮಿ ಅರುಣ್ ಪಿಳ್ಳೈ ಅವರನ್ನು ಇಡಿ ಬಂಧಿಸಿದೆ.
ಕಿಕ್ ಬ್ಯಾಕ್ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಲು ಇಡಿ ಸೋಮವಾರ ಸಂಜೆ ವಿಶೇಷ ಪಿಎಂಎಲ್‌ಎ ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರಿಂದ ಅನುಮತಿ ಪಡೆದುಕೊಂಡಿದೆ.
ಸಿಬಿಐ ಎಫ್‌ಐಆರ್‌ನಲ್ಲಿ ಆರೋಪಿ ನಂ.1 ಎಂದು ಹೆಸರಿಸಲಾಗಿರುವ ಸಿಸೋಡಿಯಾ ಅವರನ್ನು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದ ಸಿಬಿಐ, ಆರು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ ನಂತರ ಸಿಸೋಡಿಯಾ ಅವರನ್ನು ನ್ಯಾಯಾಂಗ ಬಂಧನದಲ್ಲಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಈ ಮಧ್ಯೆ ಈಗಾಗಲೇ ಸಿಬಿಐ ಆರೋಪಪಟ್ಟಿಯಲ್ಲಿ ಹೆಸರಿಸಲಾದ ಮತ್ತೊಬ್ಬ ಆರೋಪಿ ಅರುಣ್ ಪಿಳ್ಳೈ ಅವರನ್ನು ಇಡಿ ಮಂಗಳವಾರ ಬೆಳಿಗ್ಗೆ ಬಂಧಿಸಿದೆ. ದಕ್ಷಿಣ ಗ್ರೂಪ್ ನ ಮದ್ಯ ವ್ಯಾಪಾರಿಗಳನ್ನು ಪ್ರತಿನಿಧಿಸುತ್ತಿದ್ದ ಈತ ಕಿಕ್ ಬ್ಯಾಕ್ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ. ರಾಜಕಾರಣಿಗಳಾದ ಮಾಗುಂಟ ಶ್ರೀನಿವಾಸುಲು ರೆಡ್ಡಿ, ರಾಘವ್ ಮಾಗುಂಟ, ಶರತ್ ರೆಡ್ಡಿ ಮತ್ತು ತೆಲಂಗಾಣ ಸಿಎಂ ಪುತ್ರಿ ಕೆ ಕವಿತಾ ಸೇರಿದಂತೆ ಪ್ರಮುಖ ವ್ಯಕ್ತಿಗಳು ದಕ್ಷಿಣ ಗ್ರೂಪ್ ನ ಮದ್ಯ ವ್ಯಾಪಾರಿಗಳಾಗಿದ್ದಾರೆ ಎಂದು ಇಡಿ ಹೇಳಿದೆ.
Advertisement