ಪುದುಚೇರಿ: ಜ್ವರ, ಶೀತ ಮತ್ತು ಮೈಕೈ ನೋವುಗಳಂತಹ ರೋಗಲಕ್ಷಣಗಳನ್ನು ಹೊಂದಿರುವ ಎಚ್3ಎನ್2 ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಪುದುಚೇರಿ ಸರ್ಕಾರವು ಮಾರ್ಚ್ 16 ರಿಂದ ಮಾರ್ಚ್ 26 ರವರೆಗೆ 8ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಿಗೆ ಬುಧವಾರ ರಜೆ ಘೋಷಿಸಿದೆ.
ಕೇಂದ್ರಾಡಳಿತ ಪ್ರದೇಶದ ಪುದುಚೇರಿ, ಕಾರೈಕಲ್, ಮಾಹೆ ಮತ್ತು ಯಾನಂನ ಎಲ್ಲಾ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ವಿಶೇಷವಾಗಿ ಮಕ್ಕಳಲ್ಲಿ ವೈರಸ್ ಹರಡುವಿಕೆಯ ದೃಷ್ಟಿಯಿಂದ ಈ ಆದೇಶವು ಜಾರಿಯಲ್ಲಿರುತ್ತದೆ.
ಶೂನ್ಯವೇಳೆಯಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಗೃಹ ಮತ್ತು ಶಿಕ್ಷಣ ಸಚಿವ ಎ. ನಮ್ಮಶಿವಾಯಂ, 'ವಿಶೇಷವಾಗಿ ಮಕ್ಕಳಲ್ಲಿ ಜ್ವರ ಹರಡುವ ಹಿನ್ನೆಲೆಯಲ್ಲಿ, ಖಾಸಗಿ-ನಿರ್ವಹಣೆಯ ಸಂಸ್ಥೆಗಳು ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಸೇರಿದಂತೆ ಪ್ರಾಥಮಿಕ ತರಗತಿಯಿಂದ 8ನೇ ತರಗತಿವರೆಗಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲು ಸರ್ಕಾರ ನಿರ್ಧರಿಸಿದೆ' ಎಂದರು.
ಮಾರ್ಚ್ 11 ರಂದು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಇಲಾಖೆಯು ಪುದುಚೇರಿಯಲ್ಲಿ ಮಾರ್ಚ್ 4 ರವರೆಗೆ ವೈರಲ್ ಎಚ್3ಎನ್2 ಉಪ ಪ್ರಕಾರಕ್ಕೆ ಸೇರಿದ 79 ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿಕೆ ನೀಡಿತ್ತು.
ಅಮೆರಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಸಂಸ್ಥೆ (ಸಿಡಿಸಿ) ಪ್ರಕಾರ, ಎಚ್ 3 ಎನ್ 2 ಸಾಮಾನ್ಯವಾಗಿ ಹಂದಿಗಳಲ್ಲಿ ಹರಡುತ್ತದೆ ಮತ್ತು ಮನುಷ್ಯರಿಗೆ ಸೋಂಕು ತಗುಲುತ್ತದೆ. ಕೆಮ್ಮು, ಜ್ವರ, ನೋವು, ವಾಕರಿಕೆ, ವಾಂತಿ ಅಥವಾ ಅತಿಸಾರ ರೋಗಲಕ್ಷಣಗಳಿವೆ. ಇದು ಋತುಮಾನಕ್ಕೆ ಅನುಗುಣವಾಗಿ ಕಾಣಿಸಿಕೊಳ್ಳುವ ಇನ್‌ಫ್ಲುಯೆಂಜಾ ಸೋಂಕು.
Advertisement