ನವದೆಹಲಿ: ಸಂಸತ್ ನಲ್ಲಿ ವಿಪಕ್ಷಗಳು ಅದಾನಿ ವಿಷಯವಾಗಿ ಗದ್ದಲವನ್ನು ಮುಂದುವರೆಸಿದ್ದು, ಗುರುವಾರದ ಕಲಾಪ ಆರಂಭವಾಗುತ್ತಿದಂತೆಯೇ ಗದ್ದಲದ ಪರಿಣಾಮ ಮಧ್ಯಾಹ್ನ 2 ವರೆಗೂ ಕಲಾಪವನ್ನು ಮುಂದೂಡಲಾಗಿದೆ.
ಸರ್ಕಾರದ ವಿರುದ್ಧ ವಿಪಕ್ಷಗಳ ಸಂಸದರು ಮುಗಿಬಿದ್ದ ಹಿನ್ನೆಲೆಯಲ್ಲಿ ಗದ್ದಲದ ನಡುವೆಯೇ ರಾಜ್ಯಸಭೆ, ಲೋಕಸಭೆಗಳ ಕಲಾಪವನ್ನು ಮಧ್ಯಾಹ್ನ 2ವರೆಗೆ ಮುಂದೂಡಲಾಯಿತು.
ಕಲಾಪ ಮುಂದೂಡಿಕೆ ಬಳಿಕ ಸಂಸತ್ ನ ಭವನದಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, "ಅದಾನಿ ವಿಷಯವಾಗಿ ಜಂಟಿ ಸದನ ಸಮಿತಿ ತನಿಖೆಗೆ ಆದೇಶಿಸಲು ಆಗ್ರಹಿಸಿದಾಗಲೆಲ್ಲಾ, ಬಿಜೆಪಿ ಗಮನ ಬೇರೆಡೆ ಸೆಳೆಯಲು ಸಂಸತ್ ನ್ನು ನಡೆಯಲು ಬಿಡುವುದಿಲ್ಲ. ಬಿಜೆಪಿಗೆ ಸಂಸತ್ ನಲ್ಲಿ ಯಾರಾದರೂ ಗೌತಮ್ ಅದಾನಿ ಹೆಸರು ಪ್ರಸ್ತಾಪಿಸುವ ಭಯ ಕಾಡುತ್ತಿದೆ" ಎಂದು ಹೇಳಿದ್ದಾರೆ.
ಇನ್ನು ಬಜೆಟ್ ನ ಉತ್ತರಾರ್ಧ ಅಧಿವೇಶನದಲ್ಲಿ ಸಂಸತ್ ಕಲಾಪಕ್ಕೆ ನಿರಂತರ ಅಡ್ಡಿಯುಂಟಾಗುತ್ತಿರುವುದರ ಪರಿಣಾಮವಾಗಿ ಪ್ರಧಾನಿ ಮೋದಿ ಉನ್ನತ ಸಚಿವರಾದ ರಾಜನಾಥ್ ಸಿಂಗ್, ಪೀಯೂಷ್ ಗೋಯಲ್, ಅನುರಾಗ್ ಠಾಕೂರ್, ಕಿರಣ್ ರಿಜಿಜು, ಪ್ರಹ್ಲಾದ್ ಜೋಶಿ ಅವರಿಗೆ ಸಂಸತ್ ನಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.
ಇನ್ನು ಬ್ರಿಟನ್ ನಲ್ಲಿ ರಾಹುಲ್ ಗಾಂಧಿ ಭಾಷಣದ ಬಗ್ಗೆಯೂ ಸಂಸತ್ ನಲ್ಲಿ ಗದ್ದಲ ಉಂಟಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ರಾಹುಲ್ ಗಾಂಧಿ ಇಂದು ಭಾಷಣ ಮಾಡುವ ಸಾಧ್ಯತೆ ಇದೆ.
Advertisement