ಮುಚ್ಚಿದ ಲಕೋಟೆ ಪದ್ಧತಿ ಅಂತ್ಯಗೊಳಿಸಿ: ಕೇಂದ್ರದ ಒಆರ್ ಒಪಿ ಲಕೋಟೆ ಬಗ್ಗೆ ಸುಪ್ರೀಂ
ನವದೆಹಲಿ: ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ ಒಪಿ) ಯ ಬಾಕಿ ಮೊತ್ತದ ಪಾವತಿ ವಿಷಯದಲ್ಲಿ 2022 ರ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಂದಿನ ವರ್ಷ ಫೆ.28 ರ ವೇಳೆಗೆ 2019-2022 ಅವಧಿಯ 28,000 ಕೋಟಿ ರೂಪಾಯಿ ಬಾಕಿ ಮೊತ್ತವನ್ನು ಇತ್ಯರ್ಥಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮುಖ್ಯನ್ಯಾಯಾಧೀಶ ಡಿವೈ ಚಂದ್ರಚೂಡ್ ಅವರಿದ್ದ ಪೀಠ, ಕೇಂದ್ರ ಸರ್ಕಾರ ಒಆರ್ ಒಪಿ ಬಾಕಿ ಪಾವತಿ ಮಾಡುವ ಸಂಬಂಧ ನೀಡಿದ ಮುಚ್ಚಿದ ಲಕೋಟೆಯಲ್ಲಿನ ಪತ್ರವನ್ನು ಸ್ವೀಕರಿಸಲು ನಿರಾಕರಿಸಿದೆ.
ಒಆರ್ ಒಪಿ ಯೋಜನೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ಕೋರ್ಟ್ ಹೇಳಿದೆ.
25 ಲಕ್ಷ ಪಿಂಚಣಿದಾರರ ಪೈಕಿ, ನಾಲ್ಕು ಲಕ್ಷ ಮಂದಿ ಈಗಾಗಲೇ ಕೇಂದ್ರ ಸರ್ಕಾರದ ಬಾಕಿ ಪಾವತಿ ಪ್ರಸ್ತಾವನೆ ಹಾಗೂ ಹೆಚ್ಚುವರಿ ಪಿಂಚಣಿಯ ಕಾರಣದಿಂದಾಗಿ ಒಆರ್ ಒಪಿಗೆ ಅರ್ಹರಾಗಿಲ್ಲ ಎಂದು ಕೋರ್ಟ್ ಹೇಳಿದೆ.
70 ಹಾಗೂ ಅದಕ್ಕಿಂತಲೂ ಹೆಚ್ಚಿನ ವಯಸ್ಸಿನ 4-5 ಲಕ್ಷ ನಿವೃತ್ತ ಯೋಧರಿಗೆ ಒಂದು ಅಥವಾ ಅದ್ಕಕಿಂತಲೂ ಹೆಚ್ಚಿನ ಕಂತಿನಲ್ಲಿ ಒಆರ್ ಒಪಿ ಬಾಕಿಯನ್ನು ಜೂ.30 ವೇಳೆಗೆ ಪಾವತಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಇದೇ ವೇಳೆ ಮುಚ್ಚಿದ ಲಕೋಟೆ ಸಲ್ಲಿಸುವ ಅಭ್ಯಾಸದ ಬಗ್ಗೆಯೂ ಮಾತನಾಡಿರುವ ಕೋರ್ಟ್, ಇದು ನ್ಯಾಯೋಚಿತ ನ್ಯಾಯದ ಪ್ರಕ್ರಿಯೆಗೆ ಮೂಲಭೂತವಾಗಿ ವಿರುದ್ಧವಾಗಿದೆ, ವೈಯಕ್ತಿಕವಾಗಿ ನನಗೆ ಮುಚ್ಚಿದ ಲಕೋಟೆಗಳು ಹಿಡಿಸುವುದಿಲ್ಲ. ಕೋರ್ಟ್ ಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಸಿಜೆಐ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ