ಕೇರಳ ದೋಣಿ ದುರಂತ: ಸಂತ್ರಸ್ತರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಣೆ, ನ್ಯಾಯಾಂಗ ತನಿಖೆಗೆ ಆದೇಶಿಸಿದ ಸಿಎಂ ವಿಜಯನ್

23 ಜನರ ಸಾವಿಗೆ ಕಾರಣವಾದ ಕೇರಳ ದೋಣಿ ದುರಂತ ಪ್ರಕರಣದ ಸಂತ್ರಸ್ಥರಿಗೆ ಕೇರಳ ಸರ್ಕಾರ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.
ಕೇರಳ ದೋಣಿ ದುರಂತ
ಕೇರಳ ದೋಣಿ ದುರಂತ

ಮಲಪ್ಪುರಂ: 23 ಜನರ ಸಾವಿಗೆ ಕಾರಣವಾದ ಕೇರಳ ದೋಣಿ ದುರಂತ ಪ್ರಕರಣದ ಸಂತ್ರಸ್ಥರಿಗೆ ಕೇರಳ ಸರ್ಕಾರ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.

ಈ ಬಗ್ಗೆ ಸ್ವತಃ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದು, ಸಂತ್ರಸ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ವಿಜಯನ್, ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು. ಸೋಮವಾರ ಮಲಪ್ಪುರಂ ಜಿಲ್ಲೆಯ ತಿರುರಂಗಡಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ವಿಜಯನ್, ಘಟನೆಯಿಂದ ತಮಗೆ ಆಘಾತವಾಗಿದ್ದು, ಪ್ರಕರಣದ ಕುರಿತು ಕೇರಳ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಎಂದು ಹೇಳಿದರು.

ನಿನ್ನೆ ಅಂದರೆ ಭಾನುವಾರ (ಮೇ 7) ಪರಪ್ಪನಂಗಡಿಯಲ್ಲಿ ಓವರ್ ಲೋಡ್ ಡಬ್ಬಲ್ ಡೆಕ್ಕರ್ ಪ್ರವಾಸಿ ದೋಣಿ ಮುಳುಗಿ ಪೊಲೀಸ್ ಅಧಿಕಾರಿ ಸೇರಿದಂತೆ 23 ಜನರು ಸಾವನ್ನಪ್ಪಿದ್ದರು.  ಇನ್ನು ಹಲವರು ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಕ್ಷಣಾ ತಂಡಗಳ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇರಳ ಕಂದಾಯ ಸಚಿವ ಕೆ ರಾಜನ್ ಅವರು, 'ದುರಂತದ ಒಟ್ಟಾರೆ ಸಂತ್ರಸ್ಥರ ಪೈಕಿ 37 ಜನರನ್ನು ಗುರುತಿಸಲಾಗಿದೆ. 22 ಜನರು ಸಾವನ್ನಪ್ಪಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 10 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐದು ಜನರು ಈಜಿ ದಡ ಸೇರಿದ್ದಾರೆ. ಒಟ್ಟು 37 ಜನರನ್ನು ಗುರುತಿಸಲಾಗಿದೆ" ಎಂದು ಹೇಳಿದರು.

"ಬೋಟ್‌ನಲ್ಲಿ ಪ್ರಯಾಣಿಸಿದವರ ನಿಖರ ಸಂಖ್ಯೆ ತಿಳಿದುಬಂದಿಲ್ಲ. ಆದಾಗ್ಯೂ, ಎಲ್ಲಾ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ರಕ್ಷಣಾ ಮತ್ತು ಸ್ಕೂಬಾ ತಂಡ ಹುಡುಕಾಟ ನಡೆಸುತ್ತಿದೆ. ನೌಕಾಪಡೆಯ ತಂಡವೂ ಶೋಧ ಕಾರ್ಯಾಚರಣೆಗೆ ಮುಂದೆ ಬಂದಿದೆ. ನಿನ್ನೆ ಕರಾವಳಿ ಕಾವಲು ಪಡೆ ಆಗಮಿಸಿದೆ. ಅವರಿಂದ ಇತರ ಸಹಾಯವನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಎನ್‌ಡಿಆರ್‌ಎಫ್‌ನ ಎರಡನೇ ತಂಡ ಇಲ್ಲಿಗೂ ಬರುತ್ತದೆ ಎಂದು ಸಚಿವರು ಹೇಳಿದರು.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಮಲಪ್ಪುರಂ ಜಿಲ್ಲಾಧಿಕಾರಿ ವಿಆರ್ ಪ್ರೇಮ್ ಕುಮಾರ್ ಎಎನ್‌ಐಗೆ ತಿಳಿಸಿದ್ದು, 'ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ನಾವು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಘಟನೆ ಸಂಭವಿಸಿದಾಗಿನಿಂದ ಜಿಲ್ಲಾಡಳಿತವು ಎಲ್ಲಾ ಇಲಾಖೆಗಳಿಗೆ ಎಚ್ಚರಿಕೆ ನೀಡಿದೆ. ಈ ಶೋಧ ಕಾರ್ಯಾಚರಣೆಯಲ್ಲಿ ಸ್ವಯಂಪ್ರೇರಿತರಾದ ಸ್ಥಳೀಯ ಮೀನುಗಾರರಿಗೆ ನಾವು ಕೃತಜ್ಞರಾಗಿರುತ್ತೇವೆ. ನೌಕಾಪಡೆಯ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದರು.

ಸಿಎಂ ಟ್ವೀಟ್
ದುರಂತ ವಿಚಾರ ತಿಳಿಯುತ್ತಲೇ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಿಎಂ ಪಿಣರಾಯಿ ವಿಜಯನ್, "ಮಲಪ್ಪುರಂನ ತಾನೂರ್ ದೋಣಿ ಅಪಘಾತದಲ್ಲಿ ಸಂಭವಿಸಿದ ದುರಂತದ ಜೀವಹಾನಿಯಿಂದ ತೀವ್ರ ದುಃಖವಾಗಿದೆ. ಕ್ಯಾಬಿನೆಟ್ ಮಂತ್ರಿಗಳು ಮೇಲ್ವಿಚಾರಣೆ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಸಂಘಟಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ದುಃಖಿತ ಕುಟುಂಬಗಳು ಮತ್ತು ಅವರ ಕುಟುಂಬಸ್ಥರು, ಸ್ನೇಹಿತರಿಗೆ ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ" ಎಂದು ವಿಜಯನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕೂಡ ಘಟನೆಯಲ್ಲಿನ ಪ್ರಾಣಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಸಂಬಂಧಿಕರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com