ಬಾಲ್ಯ ವಿವಾಹ ನಿಷೇಧದ ಬಳಿಕ ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಸರ್ಕಾರ ಮುಂದು
ಗುವಾಹಟಿ: ಬಹುಪತ್ನಿತ್ವವನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿದೆಯೇ? ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಸಮಿತಿಯು ಕಾನೂನು ತಜ್ಞರನ್ನು ಹೊಂದಿರಲಿದ್ದು, ಏಕರೂಪ ನಾಗರಿಕ ಸಂಹಿತೆಗಾಗಿ ರಾಜ್ಯ ನೀತಿಯ ನಿರ್ದೇಶನ ತತ್ವಕ್ಕೆ ಸಂಬಂಧಿಸಿದಂತೆ ದೇಶದ ಸಂವಿಧಾನದ 25 ನೇ ವಿಧಿಯೊಂದಿಗೆ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಕಾಯಿದೆ, 1937 ರ ನಿಬಂಧನೆಗಳನ್ನು ಪರಿಶೀಲನೆ ನಡೆಸುತ್ತದೆ.
ಅಸ್ಸಾಂ ನಲ್ಲಿ ಬಹುಪತ್ನಿತ್ವದ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ಹಿಮಂತ ಬಿಸ್ವ ಶರ್ಮಾ ಅಂಕಿ-ಅಂಶಗಳನ್ನು ಬಹಿರಂಗಪಡಿಸಿಲ್ಲವಾದರೂ, "ದಕ್ಷಿಣ ಅಸ್ಸಾಂ ನ ಬರಕ್ ಕಣಿವೆ ಹಾಗೂ ಕೇಂದ್ರ ಅಸ್ಸಾಂ ನಲ್ಲಿ ಹಲವು ಪ್ರಕರಣಗಳಿದ್ದು, ದೇಶೀಯ ಮುಸ್ಲಿಮರಲ್ಲಿ ಹಾಗೂ ಶಿಕ್ಷಣವಿರುವವರಲ್ಲಿ ಬಹುಪತ್ನಿತ್ವ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ" ಎಂದು ಸಿಎಂ ಹೇಳಿದ್ದಾರೆ.
"ಬಾಲ್ಯವಿವಾಹದ ವಿರುದ್ಧ ಕ್ರಮ ಕೈಗೊಂಡ ಸಮಯದಲ್ಲಿ, ಬಹುಪತ್ನಿತ್ವದ ಬಹಳಷ್ಟು ಪ್ರಕರಣಗಳು ಇವೆ ಎಂಬುದು ನಮ್ಮ ಗಮನಕ್ಕೆ ಬಂದಿತ್ತು. 60-65 ವರ್ಷ ವಯಸ್ಸಿನವರಲ್ಲಿ ಮತ್ತು ಸಮಾಜದಲ್ಲಿ ಪ್ರಭಾವಶಾಲಿಯಾದವರಲ್ಲಿಯೂ ನಾವು ಬಹುಪತ್ನಿತ್ವ ಪ್ರಕರಣಗಳನ್ನು ಕಂಡುಕೊಂಡಿದ್ದೇವೆ" ಎಂದು ಶರ್ಮಾ ಹೇಳಿದ್ದಾರೆ.
ಬಾಲ್ಯವಿವಾಹದ ಕಡಿವಾಣವೊಂದೇ ಪರಿಹಾರವಲ್ಲ, ಬಾಲ್ಯವಿವಾಹದ ಅಂಕಿ-ಅಂಶಗಳನ್ನು ಪರಿಶೀಲಿಸಿದ ನಂತರ ಬಹುಪತ್ನಿತ್ವವನ್ನು ನಿಷೇಧಿಸುವುದು ಕೂಡ ಮುಖ್ಯ ಎಂದು ನಾವು ಅರಿತುಕೊಂಡಿದ್ದೇವೆ ಎಂದು ಬಿಸ್ವ ಶರ್ಮಾ ಹೇಳಿದ್ದಾರೆ.
"ನಾವು ನಮ್ಮೊಂದಿಗೆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಯಸುತ್ತೇವೆ. ನಾವು ಇಸ್ಲಾಮಿಕ್ ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ವ್ಯಕ್ತಿಗಳೊಂದಿಗೆ ಚರ್ಚಿಸಲು ಬಯಸುತ್ತೇವೆ, ಇದರಿಂದಾಗಿ ಇದು ಪ್ರಚೋದನೆಗಿಂತ ಹೆಚ್ಚು ಒಮ್ಮತವನ್ನು ನಿರ್ಮಿಸುವ ಚಟುವಟಿಕೆಯಾಗಬಹುದು" ಎಂದು ಶರ್ಮಾ ಹೇಳಿದ್ದಾರೆ.