ಚಂಡೀಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಅಪರಿಚಿತ ಜೊತೆ ಲಾರಿಯಲ್ಲಿ ಪ್ರಯಾಣಿಸುವ ಮೂಲಕ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಬುಧವಾರ ಹೇಳಿದ್ದಾರೆ.
ಕಾಂಗ್ರೆಸ್ ಪ್ರಕಾರ, ರಾಹುಲ್ ಗಾಂಧಿ ಅವರು ಟ್ರಕ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಯಲು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು.
“ರಾಹುಲ್ ಗಾಂಧಿ ಅವರು ಹರಿಯಾಣ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಅಪರಿಚಿತ ವ್ಯಕ್ತಿಗಳ ಜತೆ ಲಾರಿಯಲ್ಲಿ ಪ್ರಯಾಣಿಸಿದ್ದಾರೆ. ಇದು ಭದ್ರತಾ ನಿಯಮಗಳ ದೊಡ್ಡ ಉಲ್ಲಂಘನೆಯಾಗಿದೆ” ಎಂದು ವಿಜ್ ಹೇಳಿದ್ದಾರೆ.
ಅನಿಲ್ ವಿಜ್ ಅವರ ಪ್ರಕಾರ, ರಾಹುಲ್ ಗಾಂಧಿ ಅವರು ಟ್ರಕ್ ನಲ್ಲಿ ಪ್ರಯಾಣಿಸಲು ಬಯಸಿದರೆ, ಅವರು ಮೊದಲು ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು.
"ನಾನು ಇಲ್ಲಿಂದ ಸರಿಯಾದ ಭದ್ರತೆಯೊಂದಿಗೆ ಟ್ರಕ್ ಅನ್ನು ಕಳುಹಿಸುತ್ತಿದ್ದೆ, ಅದರಲ್ಲಿ ಅವರು ಎಷ್ಟು ಬೇಕಾದರೂ ಪ್ರಯಾಣಿಸಬಹುದಿತ್ತು" ಎಂದು ಅಂಬಾಲಾ ಕಂಟೋನ್ಮೆಂಟ್ ಶಾಸಕರಾಗಿರುವ ಹಿರಿಯ ಬಿಜೆಪಿ ನಾಯಕ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಸೋಮವಾರ ರಾತ್ರಿ ಲಾರಿಯಲ್ಲಿ ಪ್ರಯಾಣಿಸಿದ್ದು, ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ತಮ್ಮ ಟ್ರೇಡ್‌ಮಾರ್ಕ್ ಬಿಳಿ ಟಿ-ಶರ್ಟ್ ಧರಿಸಿ, ಟ್ರಕ್‌ನೊಳಗೆ ಕುಳಿತು, ಡ್ರೈವರ್‌ನೊಂದಿಗೆ ಪ್ರಯಾಣಿಸುತ್ತಿದ್ದಾರೆ ಮತ್ತು ಧಾಬಾದಲ್ಲಿ ಚಾಲಕರೊಂದಿಗೆ ಮಾತನಾಡುತ್ತಿದ್ದಾರೆ.
Advertisement