ಸೆಂಗೋಲ್: ಇದು ಧರ್ಮದಂಡ ಮಾತ್ರವಲ್ಲ. ಸ್ವಾತಂತ್ರ್ಯದ ಸಂಕೇತ, ಗುಲಾಮಗಿರಿ ಅಂತ್ಯಗೊಳಿಸಿದ ಸಂಕೇತ: ಪ್ರಧಾನಿ ಮೋದಿ

ಸೆಂಗೋಲ್ ಕೇವಲ ಧರ್ಮದಂಡ ಮಾತ್ರವಲ್ಲ. ಸ್ವಾತಂತ್ರ್ಯದ ಸಂಕೇತ, ಗುಲಾಮಗಿರಿ ಅಂತ್ಯಗೊಳಿಸಿದ ಸಂಕೇತ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಸೆಂಗೋಲ್ ಕೇವಲ ಧರ್ಮದಂಡ ಮಾತ್ರವಲ್ಲ. ಸ್ವಾತಂತ್ರ್ಯದ ಸಂಕೇತ, ಗುಲಾಮಗಿರಿ ಅಂತ್ಯಗೊಳಿಸಿದ ಸಂಕೇತ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ.

ನೂತನ ಸಂಸತ್ ಭವನ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಅಧೀನಂ ಪೀಠಾಧಿಪತಿಗಳು ‘ಸೆಂಗೋಲ್’ (ರಾಜದಂಡ) ಹಸ್ತಾಂತರಿಸಿದರು. ಹೊಸ ಸಂಸತ್ ಭವನದ ಉದ್ಘಾಟನೆಯ ಮುನ್ನಾದಿನ (ಶನಿವಾರ )ಅಧೀನಂ ಪೀಠಾಧಿಪತಿ ಪವಿತ್ರ ರಾಜದಂಡ ಸೆಂಗೋಲ್ (Sengol) ಅನ್ನು ಪ್ರಧಾನಿ ನರೇಂದ್ರ ಮೋದಿ (Narendera Modi) ಅವರಿಗೆ ಹಸ್ತಾಂತರಿಸಿದರು. ಆ ಮೂಲಕ ಅಧೀನರು ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಸೆಂಗೋಲ್ ಸ್ವೀಕಾರದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, 'ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂದರ್ಭ ಬಂದಾಗ, ಅಧಿಕಾರದ ಹಸ್ತಾಂತರದ ಪ್ರತೀಕವಾಗಿ ಸೆಂಗೋಲ್‌ಅನ್ನು ಬಳಸಲಾಯಿತು. ತಮಿಳು ಪರಂಪರೆಯಲ್ಲಿ ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್‌ ಅನ್ನು ನೀಡಲಾಗುತ್ತದೆ. ಹಾಗೆಯೇ, ರಾಜಧರ್ಮ ಪಾಲನೆಯ ಜವಾಬ್ದಾರಿಯನ್ನೂ ಸೆಂಗೋಲ್‌ ತಿಳಿಸುತ್ತದೆ. 1947ರಲ್ಲಿ ಅಧಿಕಾರದ ಹಸ್ತಾಂತರದ ವೇಳೆ ಸೆಂಗೋಲ್‌ ಅನ್ನು ನೀಡಿದ್ದು ಗುಲಾಮಗಿರಿಯ ಅಂತ್ಯದ ಸಂಕೇತವಾಗಿತ್ತು' ಎಂದು ಹೇಳಿದರು. 

'ಇಂತಹ ರಾಜದಂಡವನ್ನು ನಾವು ಸಂಸತ್ತಿನಲ್ಲಿ ಪ್ರತಿಷ್ಠಾಪಿಸುತ್ತಿದ್ದೇವೆ. ದೇಶದ ಜನರ ಏಳಿಗೆ, ರಾಜಧರ್ಮವನ್ನು ಪಾಲಿಸುವುದರ ದ್ಯೋತಕವಾಗಿ ಸಂಸತ್ತಿನಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಆದರೆ, ರಾಜದಂಡವನ್ನು ಪ್ರಯಾಗರಾಜ್‌ನ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು. ಆನಂದ ಭವನದಲ್ಲಿ ವಾಕಿಂಗ್‌ ಸ್ಟಿಕ್‌ (ಊರುಗೋಲು) ಎಂದು ಪ್ರದರ್ಶನಕ್ಕಾಗಿ ಇರಿಸಲಾಗಿತ್ತು. ಆದರೆ, ನಿಮ್ಮ ಈ ಸೇವಕ ಹಾಗೂ ನಮ್ಮ ಸರ್ಕಾರವು ಆನಂದ ಭವನದಿಂದ ಸೆಂಗೋಲ್‌ಅನ್ನು ತಂದಿದ್ದೇವೆ. ಸ್ವಾತಂತ್ರ್ಯದ ಮೊದಲ ಫಲದ ರೂಪದಲ್ಲಿರುವ ರಾಜದಂಡವನ್ನು ಸಂಸತ್ತಿನಲ್ಲಿ ಇರಿಸುತ್ತೇವೆ. ಪ್ರಜಾಪ್ರಭುತ್ವದ ಮಂದಿರದಲ್ಲಿ ಸೆಂಗೋಲ್‌ ಪ್ರತಿಷ್ಠಾಪನೆಯಾಗುತ್ತಿರುವುದು ಸಂತಸ ತಂದಿದೆ. ನಮಗೆ ಇದು ಕರ್ತವ್ಯಪಥ ತೋರಿಸುತ್ತದೆ, ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುತ್ತದೆ. ಜನತಾ ಜನಾರ್ದನರ ಸೇವೆಗೆ ಸ್ಫೂರ್ತಿ ನೀಡುತ್ತದೆ' ಎಂದರು. 

'ತಮಿಳುನಾಡಿನ ಸಂಸ್ಕೃತಿ ಇಂದಿಗೂ ಸಮೃದ್ಧಿಯಾಗಿದೆ ಎಂದರೆ ಅದಕ್ಕೆ ಅಧೀನಮ್‌ ಸ್ವಾಮೀಜಿಗಳಂತಹ ಸಂತರ ಕೊಡುಗೆ ಇದೆ. ಇಂತಹ ಸಂಸ್ಥಾನಗಳಿಂದಲೇ ತಮಿಳುನಾಡಿನಲ್ಲಿ ಪರಂಪರೆ ಶ್ರೀಮಂತವಾಗಿದೆ' ಎಂದು ಬಣ್ಣಿಸಿದರು. ಪ್ರಧಾನಿ ಭಾಷಣಕ್ಕೂ ಮೊದಲು ಮೋದಿ ಅವರ ಹಣೆಗೆ ತಿಲಕ ಇಟ್ಟು, ಹಾರ ಹಾಕಿ, ಶಾಲು ಹೊದಿಸಿದ ಸ್ವಾಮೀಜಿಗಳು ಬಳಿಕ ಮೋದಿ ಅವರಿಗೆ ಸೆಂಗೋಲ್‌ಅನ್ನು ನೀಡಿದರು. ಮೋದಿ ಅವರು ರಾಜದಂಡಕ್ಕೆ ನಮಸ್ಕಾರ ಮಾಡಿದರು. ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.

ವಿಶೇಷವೆಂದರೆ ಸಂಸತ್‌ ಭವನದಲ್ಲಿ ನಡೆಯಲಿರುವ ಉದ್ಘಾಟನೆ ಸಂಬಂಧಿತ ಪೂಜಾ ಕೈಂಕರ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಪುರೋಹಿತರಿಗೆ ನೀಡಲಾಗಿದೆ. ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವುದಕ್ಕಾಗಿ ಶೃಂಗೇರಿಯ ಪುರೋಹಿತರ ತಂಡ ಆಗಲೇ ದಿಲ್ಲಿ ತಲುಪಿಸಿದ್ದು ಶನಿವಾರ ಸಂಜೆಯಿಂದಲೇ ಕಾರ್ಯಕ್ರಮಗಳು ನಡೆಯಲಿವೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ಭವನವನ್ನು ಉದ್ಘಾಟಿಸಲಿದ್ದು, ಅದಕ್ಕೆ ಸಂಬಂಧಿಸಿದ ಪೂಜೆಗಳನ್ನು ಶೃಂಗೇರಿಯ ವೇದಪಾರಂಗತ ಪುರೋಹಿತರಾದ ಸೀತಾರಾಮ ಶರ್ಮ, ಶ್ರೀರಾಮ ಶರ್ಮ ಹಾಗೂ ಲಕ್ಷ್ಮೀಶ ತಂತ್ರಿ ಅವರು ನೆರವೇರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com