ಆಸ್ಪತ್ರೆಯಲ್ಲಿ ಸತ್ಯೇಂದ್ರ ಜೈನ್ ಭೇಟಿ ಮಾಡಿದ ಕೇಜ್ರಿವಾಲ್
ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಪಕ್ಷದ ನಾಯಕ, ಸತ್ಯೇಂದ್ರ ಜೈನ್ ಅವರನ್ನು ಭಾನುವಾರ ಆಸ್ಪತ್ರೆಯಲ್ಲಿ ಭೇಟಿಯಾದರು ಮತ್ತು ಮಾಜಿ ಸಚಿವರನ್ನು "ಧೈರ್ಯಶಾಲಿ" ಹಾಗೂ "ಹೀರೋ" ಎಂದು ಬಣ್ಣಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ತಿಂಗಳಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದ ಜೈನ್ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಶುಕ್ರವಾರ ಸುಪ್ರೀಂ ಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಜೈಲಿನಲ್ಲಿ ಕುಸಿದು ಬಿದ್ದ ಜೈನ್ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೈನ್ ಅವರೊಂದಿಗಿನ ಭೇಟಿಯ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕೇಜ್ರಿವಾಲ್, "ಒಬ್ಬ ಧೈರ್ಯಶಾಲಿ ನಾಯಕನನ್ನು ಭೇಟಿ ಮಾಡಿದೆ" ಎಂದು ಹೇಳಿದ್ದಾರೆ.
ಮಾಜಿ ಆರೋಗ್ಯ ಸಚಿವರನ್ನು ಮೊದಲು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ನಂತರ, ಉಸಿರಾಟದ ತೊಂದರೆಯಿಂದಾಗಿ ಲೋಕನಾಯಕ ಜಯಪ್ರಕಾಶ್(ಎಲ್ಎನ್ಜೆಪಿ) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಜೈನ್ ಅವರಿಗೆ ಅವರು ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಅಲ್ಲದೆ ಜುಲೈ 11 ರಂದು ಅಂತ್ಯಗೊಳ್ಳುವ ಮಧ್ಯಂತರ ಜಾಮೀನು ಅವಧಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡದಂತೆ ಜೈನ್ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.


