ಸರ್ಕಾರಿ ಅನುದಾನಿತ, ವಸತಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ರಾಷ್ಟ್ರೀಯ ಮಾದರಿ ರೂಪಿಸಿ: ಕೇಂದ್ರಕ್ಕೆ ಸುಪ್ರೀಂ
ನವದೆಹಲಿ: ದೇಶಾದ್ಯಂತ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಾಣಕ್ಕೆ ರಾಷ್ಟ್ರೀಯ ಮಾದರಿಯನ್ನು ರೂಪಿಸಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ, ರಾಷ್ಟ್ರಾದ್ಯಂತ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಗಳ ವಿತರಣೆಗಾಗಿ ರೂಪಿಸಿರುವ ನೀತಿಯ ಬಗ್ಗೆಯೂ ಕೇಳಿದ್ದು ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ಪ್ರಕ್ರಿಯೆಯಲ್ಲಿ ಕೇಂದ್ರ ಏಕರೂಪತೆ ತರಬೇಕಾಗಿರುವುದಾಗಿ ಹೇಳಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದು, ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸಲು ಕರಡು ರಾಷ್ಟ್ರೀಯ ನೀತಿಯನ್ನು ರೂಪಿಸಲಾಗಿದೆ ಮತ್ತು ಅಭಿಪ್ರಾಯಗಳನ್ನು ಪಡೆಯಲು ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
ಶಾಲೆಗಳಲ್ಲಿ ಓದುತ್ತಿರುವ ಬಾಲಕಿಯರ ಋತುಚಕ್ರದ ನೈರ್ಮಲ್ಯದ ಬಗ್ಗೆ ಏಕರೂಪದ ರಾಷ್ಟ್ರೀಯ ನೀತಿಯನ್ನು ರೂಪಿಸುವ ಕುರಿತು ಕೇಂದ್ರಕ್ಕೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಲ್ಲಿ ರಾಜ್ಯಗಳು, ವಿಫಲವಾದರೆ "ಕಠಿಣ ಕಾನೂನು ಪ್ರಯೋಗ"ವನ್ನು ಆಶ್ರಯಿಸುವುದಾಗಿ ಸುಪ್ರೀಂ ಕೋರ್ಟ್ ಈ ಹಿಂದೆ ಎಚ್ಚರಿಕೆ ನೀಡಿತ್ತು.
ಏಪ್ರಿಲ್ 10 ರಂದು, ಸುಪ್ರೀಂ ಕೋರ್ಟ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MOHFW) ಕಾರ್ಯದರ್ಶಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯಗೊಳಿಸಲು ಮತ್ತು ರಾಷ್ಟ್ರೀಯ ನೀತಿಯನ್ನು ರೂಪಿಸಲು ಸಂಬಂಧಿತ ಡೇಟಾವನ್ನು ಸಂಗ್ರಹಿಸಲು ನೋಡಲ್ ಅಧಿಕಾರಿಯಾಗಿ ನೇಮಿಸಿತ್ತು.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರದಿಂದ ಒದಗಿಸಲಾದ ನಿಧಿಗಳ ಸಹಾಯದಿಂದ ಅಥವಾ ತಮ್ಮದೇ ಸಂಪನ್ಮೂಲಗಳ ಮೂಲಕ ಕೈಗೊಂಡ ನೈರ್ಮಲ್ಯ ನಿರ್ವಹಣಾ ಕಾರ್ಯತಂತ್ರ ಯೋಜನೆ ವಿವರಗಳನ್ನು ರಾಷ್ಟ್ರೀಯ ಆರೋಗ್ಯ ಮಿಷನ್‌ನ ಮಿಷನ್ ಸ್ಟೀರಿಂಗ್ ಗ್ರೂಪ್‌ಗೆ 4 ವಾರಗಳ ಅವಧಿಯಲ್ಲಿ ಸಲ್ಲಿಸಲು ಆದೇಶಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ