

ನಾಗೌರ್: ರಾಜಸ್ಥಾನದ ನಾಗೌರ್‌ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಣಿಸುತ್ತಿದ್ದ ರಥಕ್ಕೆ ವಿದ್ಯುತ್ ತಂತಿ ತಗುಲಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಅಮಿತ್ ಶಾ ಅವರು ಇಂದು ನಾಗೌರ್‌ನ ಕುಚಮಾನ್ಸಿಟಿ ಮತ್ತು ಮಕ್ರಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಪರ್ಬತ್ ಸರ್ ಗೆ ತೆರಳಿದರು.
ಪರ್ಬತ್ಸರ್‌ನಲ್ಲಿ ಎರಡೂ ಬದಿಗಳಲ್ಲಿ ಅಂಗಡಿಗಳು ಮತ್ತು ಮನೆಗಳಿರುವ ಮಾರ್ಗದ ಮೂಲಕ ಹಾದುಹೋಗುವಾಗ, ಅವರ 'ರಥ'(ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನ)ಕ್ಕೆ ವಿದ್ಯುತ್ ತಂತಿ ತಗುಲಿ ಕಿಡಿ ಹೊತ್ತಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ವಾಹನ ನಿಲ್ಲಿಸಿ ಸಂಭವಿಸಲಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನೆಯ ನಂತರ ಕೇಂದ್ರ ಗೃಹ ಸಚಿವರು ರೋಡ್ ಶೋವನ್ನು ರದ್ದುಗೊಳಿಸಿದ್ದು, ಅಲ್ಲಿಂದ ಕಾರಿನಲ್ಲಿ ತೆರಳಿದರು.
ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದಾರೆ.
Advertisement