ಜಮ್ಮು-ಕಾಶ್ಮೀರ: ಗಡಿಯಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ, ಓರ್ವ ಬಿಎಸ್‌ಎಫ್ ಯೋಧ ಹುತಾತ್ಮ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ರಾಮಗಢ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಗುರುವಾರ ಮುಂಜಾನೆ ಪಾಕಿಸ್ತಾನ ಸೇನಾಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದಾರೆ.
ಗಡಿ ಔಟ್‌ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನಾಪಡೆ ದಾಳಿ ನಡೆಸಿದ್ದು, 24 ದಿನಗಳ ಅಂತರದಲ್ಲಿ ಇದು ಮೂರನೇ ಕದನ ವಿರಾಮ ಉಲ್ಲಂಘನೆಯಾಗಿದೆ.
ಗಾಯಗೊಂಡಿರುವ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜಮ್ಮುವಿನಲ್ಲಿರುವ ಜಿಎಂಸಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ರೇಂಜರ್ಸ್‌ನ ಈ ಅಪ್ರಚೋದತ ದಾಳಿಗೆ ಬಿಎಸ್‌ಎಫ್ ಯೋಧರು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಿಎಸ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಅಕ್ಟೋಬರ್ 28 ರಂದು ಪಾಕಿಸ್ತಾನ ರೇಂಜರ್ಸ್ ಸುಮಾರು 7 ಗಂಟೆಗಳ ಗುಂಡಿನ ಹಾಗೂ ಷೆಲ್ ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಹಾಗೂ ಓರ್ವ ಮಹಿಳೆ ಗಾಯಗೊಂಡಿದ್ದರು.
ಅಕ್ಟೋಬರ್ 17 ರಂದು ಅರ್ನಿಯಾ ಸೆಕ್ಟರ್‌ನಲ್ಲಿ ನಡೆದ ಅಪ್ರಚೋದಿತ ದಾಳಿಯಲ್ಲಿ ಇಬ್ಬರು ಬಿಎಸ್‌ಎಫ್ ಸಿಬ್ಬಂದಿಗಳು ಗಾಯಗೊಂಡಿದ್ದರು.
2021ರ ಫೆ. 25ರಂದು ಉಭಯ ರಾಷ್ಟ್ರಗಳು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದಾದ ಬಳಿಕ ನಡೆಯುತ್ತಿರುವ 6ನೆಯ ಕದನ ವಿರಾಮ ಉಲ್ಲಂಘನೆ ಇದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ