ಭೋಪಾಲ್: ತಾಂತ್ರಿಕದೋಷದಿಂದ ವಾಯುಸೇನೆ ಹೆಲಿಕಾಪ್ಟರ್ ವೊಂದು ಮಧ್ಯ ಪ್ರದೇಶದ ಹಳ್ಳಿಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಹೆಲಿಕಾಪ್ಟರ್ ನಲ್ಲಿದ್ದ ಎಲ್ಲಾ 6 ಮಂದಿ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಆರು ಜನರಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಭಾನುವಾರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಹಳ್ಳಿಯೊಂದರಲ್ಲಿ 'ತುರ್ತು' ಲ್ಯಾಂಡಿಂಗ್ ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಎಎಫ್‌ನ III ಎಚ್‌ಯು ಘಟಕದ ಹೆಲಿಕಾಪ್ಟರ್ ಭೋಪಾಲ್ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿಮೀ ದೂರದಲ್ಲಿರುವ ಡುಂಗರಿಯಾ ಗ್ರಾಮದ ಸರೋವರದ ಬಳಿಯ ಕಬ್ಬಿನ ಗದ್ದೆಯಲ್ಲಿ "ತುರ್ತು" ಲ್ಯಾಂಡಿಂಗ್ ಮಾಡಿದೆ. ಇಂದು ಬೆಳಗ್ಗೆ 8.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಲಿಕಾಪ್ಟರ್ ಭೋಪಾಲ್‌ನಿಂದ ಝಾನ್ಸಿಗೆ ತೆರಳುತ್ತಿತ್ತು. ಈ ವೇಳೆ ಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಪೈಲಟ್ ಮತ್ತು ಐವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಸ್ಥಳದಲ್ಲಿದ್ದ ಬೆರಾಸಿಯಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನರೇಂದ್ರ ಕುಲಸ್ತೆ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
ತಾಂತ್ರಿಕ ದೋಷವನ್ನು ಸರಿಪಡಿಸಲು ಐಎಎಫ್‌ನ ತಂಡವು ಸ್ಥಳಕ್ಕೆ ತಲುಪಿದೆ. ಮತ್ತೊಂದು ತಂತ್ರಜ್ಞರ ತಂಡ ನಾಗ್ಪುರದಿಂದ ಡುಂಗರಿಯಾ ಗ್ರಾಮವನ್ನು ಶೀಘ್ರದಲ್ಲೇ ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
Advertisement