ತಿರುನೆಲ್ವೇಲಿ: ನೆಲ್ಲೈಯಪ್ಪರ್ ದೇವಸ್ಥಾನದ ಬಳಿಯ ಫ್ಯಾನ್ಸಿ ಸ್ಟೋರ್‌ನ ಗೋದಾಮಿನಲ್ಲಿ ಯುವಕನೋರ್ವ ಕುಡುಗೋಲಿನಿಂದ ಯುವತಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಮೃತ ಯುವತಿಯನ್ನು ತಿರುಪ್ಪನಿಕರಿಸಲ್ಕುಲಂ ನಿವಾಸಿ ಸಂಥಿಯಾ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಸಂಥಿಯಾ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆರು ತಿಂಗಳ ಹಿಂದೆ ಆಕೆಯ ಅಂಗಡಿಯ ಬಳಿ ಇರುವ 'ಕವರಿಂಗ್' ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ರಾಜೇಶ್ ಕಣ್ಣಾ ಎಂಬಾತ ಆಕೆಯ ಜತೆ ಸ್ನೇಹ ಬೆಳೆಸಿದ್ದನು.
ನಂತರ ಆಕೆಯ ಮುಂದೆ ತನ್ನ ಪ್ರೇಮ ಪ್ರಸ್ತಾಪವನ್ನು ಮಾಡಿದ್ದನು. ಇದಾದ ಆಕೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಆದಾಗ್ಯೂ, ಯುವಕನು ತನ್ನ ಕೆಲಸವನ್ನು ಬಿಟ್ಟ ನಂತರವೂ ಅವಳನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು.
ಎರಡು ದಿನಗಳ ಹಿಂದೆ ರಾಜೇಶ್ ಕಣ್ಣಾ ಮೃತಳ ಅಕ್ಕನಿಗೆ ದೂರವಾಣಿ ಕರೆ ಮಾಡಿ ಸಂಥಿಯಾ ಬಗ್ಗೆ ದೂರು ನೀಡಿದ್ದನು. ಇಂದು ಮಧ್ಯಾಹ್ನ ಸಂಥಿಯಾ ಕೆಲವು ಸಾಮಗ್ರಿಗಳನ್ನು ತರಲು ತಾನು ಕೆಲಸ ಮಾಡುತ್ತಿದ್ದ ಫ್ಯಾನ್ಸಿ ಸ್ಟೋರ್‌ನ ಗೋಡೌನ್‌ಗೆ ಹೋಗಿದ್ದಳು. ಇದನ್ನು ಗಮನಿಸಿದ ಯುವಕ ಅವಳನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯ ಕತ್ತು ಸೀಳಿ ಪರಾರಿಯಾಗಿದ್ದಾನೆ.
ಎಷ್ಟು ಸಮಯವಾದರೂ ಸಂಥಿಯಾ ಬರದಿದ್ದರಿಂದ ಸಹೋದ್ಯೋಗಿಗಳು ಗೋಡೌನ್ ಬಳಿಗೆ ಹೋಗಿದ್ದಾರೆ. ಈ ವೇಳೆ ಸಂಥಿಯಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ.
ತಿರುನೆಲ್ವೇಲಿ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Advertisement