
ಗ್ವಾಲಿಯರ್: ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಸರ್ಕಾರಿ ದೈಹಿಕ ಶಿಕ್ಷಣ ಸಂಸ್ಥೆಯ ಸುಮಾರು 100 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಪನೀರ್ (ಕಾಟೇಜ್ ಚೀಸ್) ಖಾದ್ಯವನ್ನು ಸೇವಿಸಿದ್ದಾರೆ. ಸಂಸ್ಥೆಯ ಮೆಸ್‌ನಲ್ಲಿ ಆಹಾರವನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಲಕ್ಷ್ಮೀಬಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್‌ನ ಸುಮಾರು 100 ವಿದ್ಯಾರ್ಥಿಗಳನ್ನು ಮಂಗಳವಾರ ಸರ್ಕಾರಿ ಜಯರೋಗ ಆಸ್ಪತ್ರೆಗೆ ಕರೆತರಲಾಯಿತು. ಬಹುಶಃ ವಿಷಾಹಾರ ಸೇವನೆಯಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅದರ ಅಧೀಕ್ಷಕ ಆರ್‌ಕೆಎಸ್ ಧಾಕಡ್ ತಿಳಿಸಿದ್ದಾರೆ.
'ವಿದ್ಯಾರ್ಥಿಗಳು ಪನೀರ್ ಸಬ್ಜಿಯನ್ನು ಸೇವಿಸಿದ್ದಾರೆ. ಇದು ವಿಷಾಹಾರಕ್ಕೆ ಕಾರಣವಾಗಿರಬಹುದು. ಅವರಲ್ಲಿ ಕೆಲವರು ತೀವ್ರ ಅಸ್ವಸ್ಥರಾಗಿದ್ದಾರೆ. ಆದರೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಅವರು ಹೇಳಿದರು.
ಸಂಸ್ಥೆಯ ರಿಜಿಸ್ಟ್ರಾರ್ ಅಮಿತ್ ಯಾದವ್ ಮಾತನಾಡಿ, ಮಂಗಳವಾರ ಕೆಲವು ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಮತ್ತು ಅವರು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಆದಾಗ್ಯೂ, ವೈದ್ಯಕೀಯ ಪರೀಕ್ಷೆಯಲ್ಲಿ ಸೋಂಕು ಕಂಡುಬಂದಿದೆ ಮತ್ತು ಮಂಗಳವಾರ ಸಂಜೆಯ ವೇಳೆಗೆ ಸುಮಾರು 100 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಹೇಳಿದರು.
ಸುಮಾರು 70 ವಿದ್ಯಾರ್ಥಿಗಳು ಸದ್ಯ ಸುಧಾರಿಸಿಕೊಂಡಿದ್ದಾರೆ. ಆದರೂ, ಎಲ್ಲಾ ವಿದ್ಯಾರ್ಥಿಗಳನ್ನು ವೈದ್ಯಕೀಯ ವೀಕ್ಷಣೆಯಲ್ಲಿಡಲಾಗಿದೆ ಮತ್ತು ಅವರಲ್ಲಿ ಯಾರೊಬ್ಬರೂ ಗಂಭೀರವಾಗಿಲ್ಲ. ಮೆಸ್‌ನಲ್ಲಿ ವಿದ್ಯಾರ್ಥಿಗಳು ಸೇವಿಸುವ ಆಹಾರವನ್ನು ಪರಿಶೀಲಿಸಲಾಗುತ್ತಿದೆ ಎಂದರು.
Advertisement