
ಲಖನೌ: 2015ರ ಗಲಭೆ ಪ್ರಕರಣದಲ್ಲಿ ಉತ್ತರಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಹೊರತುಪಡಿಸಿ ಉಳಿದ 81 ಜನರ ವಿರುದ್ಧದ ಆರೋಪಗಳನ್ನು ಕೈಬಿಡಲು ಉತ್ತರ ಪ್ರದೇಶ ಸರ್ಕಾರಕ್ಕೆ ವಾರಣಾಸಿ ಕೋರ್ಟ್ ಅನುಮತಿ ನೀಡಿದೆ.
ಪ್ರಕರಣದ 82 ಆರೋಪಿಗಳ ಪೈಕಿ 81 ಆರೋಪಿಗಳ ವಿರುದ್ಧದ ಆರೋಪಗಳನ್ನು ಬಿಜೆಪಿ ಸರ್ಕಾರ ಹಿಂಪಡೆಯಲು ನಿರ್ಧರಿಸಿದ ನಂತರ ವಾರಣಾಸಿ ನ್ಯಾಯಾಲಯದ ಆದೇಶ ಹೊರಬಿದ್ದಿದೆ. 81 ಮಂದಿಯಲ್ಲಿ ಯುಪಿ ಸಚಿವ ದಯಾಶಂಕರ್ ಮಿಶ್ರಾ ದಯಾಳ್ ಮತ್ತು ಕೆಲವು ಹಿಂದೂ ಸಂತರ ವಿರುದ್ಧ ಆರೋಪಗಳನ್ನು ಕೈಬಿಡಲಾಗಿದೆ.
ಇನ್ನು ಈ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಜಯ್ ರೈ, ರಾಜ್ಯ ಸರ್ಕಾರದ 'ತಾರತಮ್ಯದ ಕ್ರಮ'ಕ್ಕೆ ನಾನು ಹೆದರುವುದಿಲ್ಲ. ಸನಾತನ ಸಮಾಜಕ್ಕೆ ಮತ್ತು ಪ್ರತಿ ತುಳಿತಕ್ಕೊಳಗಾದ ವ್ಯಕ್ತಿ ಅಥವಾ ವರ್ಗಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ನ್ಯಾಯಾಧೀಶ ಅವ್ನಿಶ್ ಗೌತಮ್ ಅವರ ನ್ಯಾಯಾಲಯವು ಅಜಯ್ ರೈ ಹೊರತುಪಡಿಸಿ 81 ಆರೋಪಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ಆದೇಶಿಸಿದೆ ಎಂದು ಸರ್ಕಾರಿ ವಕೀಲ ವಿನಯ್ ಸಿಂಗ್ ಹೇಳಿದ್ದಾರೆ.
ಇಲ್ಲಿನ ದಶಾಶ್ವಮೇಧ್ ಪೊಲೀಸ್ ಠಾಣೆಯಲ್ಲಿ ಅಜಯ್ ರೈ ಸೇರಿದಂತೆ 82 ಜನರ ವಿರುದ್ಧ 'ಅನ್ಯಾಯ ಪ್ರತೀಕಾರ ಯಾತ್ರೆ' ವೇಳೆ ಹಿಂಸಾಚಾರ ಭುಗಿಲೆದ್ದ ನಂತರ ಗಲಭೆ, ಬೆಂಕಿ ಹಚ್ಚುವಿಕೆ, ಕೊಲೆ ಯತ್ನ ಮತ್ತು ಸರ್ಕಾರಿ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.
ಅಜಯ್ ಅವರ ವಕೀಲ ಅನುಜ್ ಸಿಂಗ್ ಅವರು ನ್ಯಾಯಾಲಯದ ಆದೇಶವನ್ನು ತಾರತಮ್ಯ ಎಂದು ವಿವರಿಸಿದ್ದಾರೆ. ಅಲ್ಲದೆ ಇದರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.
Advertisement