ಮುನ್ಸಿಪಲ್ ಕಾರ್ಪೋರೇಷನ್ ನೇಮಕಾತಿ ಹಗರಣ: ಸಚಿವ ಫಿರ್ಹಾದ್ ಹಕೀಮ್, ಶಾಸಕ ಮದನ್ ಮಿತ್ರಾ ನಿವಾಸದ ಮೇಲೆ ಸಿಬಿಐ ದಾಳಿ

ರಾಜ್ಯದಲ್ಲಿ ಪೌರ ಸಂಸ್ಥೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಫಿರ್ಹಾದ್ ಹಕೀಮ್ ಮತ್ತು ಶಾಸಕ ಮದನ್ ಮಿತ್ರಾ ಅವರ ನಿವಾಸಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ.
ಫಿರ್ಹಾದ್ ಹಕೀಮ್-ಮದನ್ ಮಿತ್ರಾ
ಫಿರ್ಹಾದ್ ಹಕೀಮ್-ಮದನ್ ಮಿತ್ರಾ

ಕೋಲ್ಕತ್ತಾ: ರಾಜ್ಯದಲ್ಲಿ ಪೌರ ಸಂಸ್ಥೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಫಿರ್ಹಾದ್ ಹಕೀಮ್ ಮತ್ತು ಶಾಸಕ ಮದನ್ ಮಿತ್ರಾ ಅವರ ನಿವಾಸಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ.

ಪ್ರಕರಣದಲ್ಲಿ ಸಚಿವರು ಹಾಗೂ ಶಾಸಕರ ಕೈವಾಡವಿರುವುದು ಕಂಡು ಬಂದಿದೆ ಎಂದು ಸಿಬಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಸಿಬಿಐ ತಂಡ ಪಶ್ಚಿಮ ಬಂಗಾಳದ ಸಚಿವ ಫಿರ್ಹಾದ್ ಹಕೀಂ ಮತ್ತು ಶಾಸಕ ಮದನ್ ಮಿತ್ರ ಅವರ ಮನೆ ಮೇಲೆ ದಾಳಿ ನಡೆಸಿದೆ. ಮಹಾನಗರ ಪಾಲಿಕೆಯಲ್ಲಿ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಎರಡು ವರ್ಷಗಳ ಹಿಂದೆಯೂ ಫಿರ್ಹಾದ್ ಸಿಬಿಐ ಕಪಿಮುಷ್ಠಿಗೆ ಸಿಕ್ಕಿಬಿದ್ದಿದ್ದರು. ಆಗ ನಾರದ ಹಗರಣದಲ್ಲಿ ಕೇಂದ್ರೀಯ ತನಿಖಾ ದಳ ಅವರನ್ನು ವಿಚಾರಣೆ ನಡೆಸಿತ್ತು. ಇದೀಗ ನಾಗರಿಕ ಸಂಸ್ಥೆ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಸಿಬಿಐ ಅವರ ಮನೆ ಮೇಲೆ ದಾಳಿ ನಡೆಸಿದೆ.

ಮೂಲಗಳ ಪ್ರಕಾರ ಕೇಂದ್ರ ತನಿಖಾ ಸಂಸ್ಥೆಯ ದಾಳಿ ವೇಳೆ ಫಿರ್ಹಾದ್ ಹಕೀಮ್ ಮನೆಯಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ಇನ್ನು ಫಿರ್ಹಾದ್ ಬೆಂಬಲಿಗರು ಮನೆ ಮುಂದೆ ಜಮಾಯಿಸಿದ್ದಾರೆ. ಮದನ್ ಮಿತ್ರಾ ಅವರು ಟಿಎಂಸಿಯ ಕಮರ್ಹಟಿಯ ತೃಣಮೂಲ ಶಾಸಕರಾಗಿದ್ದಾರೆ. ಮಾಹಿತಿ ಪ್ರಕಾರ, ಮಮತಾ ಸರ್ಕಾರದಲ್ಲಿ ಸಚಿವ ಫಿರ್ಹಾದ್ ಹಕೀಂ ಮತ್ತು ಶಾಸಕ ಮದನ್ ಮಿತ್ರಾ ಅವರ ನಿವಾಸಗಳು ಸೇರಿದಂತೆ 15 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಲಾಗುತ್ತಿದೆ.

ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವ ಹಕೀಮ್ ಟಿಎಂಸಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಶೋಧ ಕಾರ್ಯ ಆರಂಭವಾದ ಕೂಡಲೇ ಹಕೀಂ ಬೆಂಬಲಿಗರು ಅವರ ಮನೆಯ ಹೊರಗೆ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಪಶ್ಚಿಮ ಬಂಗಾಳದ ಮುನ್ಸಿಪಲ್ ಸಂಸ್ಥೆಗಳು ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಈ ವರ್ಷ ಏಪ್ರಿಲ್ 21ರಂದು ಕೋಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠವು ಮುನ್ಸಿಪಲ್ ಕಾರ್ಪೊರೇಷನ್ ನೇಮಕಾತಿ ಹಗರಣದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶಿಸಿತ್ತು. ಜಾರಿ ನಿರ್ದೇಶನಾಲಯದ (ಇಡಿ) ಅರ್ಜಿಯ ಆಧಾರದ ಮೇಲೆ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಆದರೆ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರಿಗೆ ಮುನ್ಸಿಪಲ್ ಪ್ರಕರಣಗಳ ವಿಚಾರಣೆ ನಡೆಸಲು ಯಾವುದೇ ಅಧಿಕಾರವಿಲ್ಲ ಎಂದು ಬಂಗಾಳ ಸರ್ಕಾರ ಆರೋಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com