ಎನ್ ಚಂದ್ರಬಾಬು ನಾಯ್ಡುಗೆ ಜೈಲಿನಲ್ಲಿ ಜೀವ ಬೆದರಿಕೆ; ಕೇಂದ್ರ ಸಚಿವ ಅಮಿತ್ ಶಾಗೆ ಪುತ್ರ ನಾರಾ ಲೋಕೇಶ್ ದೂರು

ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಜೀವಕ್ಕೆ ಜೈಲಿನಲ್ಲಿ ಬೆದರಿಕೆ ಇದೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
Updated on

ಅಮರಾವತಿ: ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಜೀವಕ್ಕೆ ಜೈಲಿನಲ್ಲಿ ಬೆದರಿಕೆ ಇದೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.

ಬುಧವಾರ ರಾತ್ರಿ ದೆಹಲಿಯಲ್ಲಿ ಶಾ ಅವರನ್ನು ಭೇಟಿ ಮಾಡಿದ ಲೋಕೇಶ್, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ರಾಜಕೀಯ ದ್ವೇಷದಿಂದ ನಮ್ಮನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆಂಧ್ರ ಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ, ಚಂದ್ರಬಾಬು ನಾಯ್ಡು ವಿರುದ್ಧದ ಆಡಳಿತದ ಸೇಡಿಗಾಗಿ ಅವರನ್ನು ಜೈಲಿನಲ್ಲಿ ಇರಿಸಲಾಗಿರುವ ಬಗ್ಗೆ ಮತ್ತು ಅವರ ಜೀವಕ್ಕೆ ಅಪಾಯವಿರುವ ಬಗ್ಗೆ ಅಮಿತ್ ಶಾಗೆ ತಿಳಿಸಿದ್ದೇನೆ ಎಂದು ಸಭೆಯ ನಂತರ ಟಿಡಿಪಿ ನಾಯಕ ಟ್ವೀಟ್ ಮಾಡಿದ್ದಾರೆ.

ಒಂದೆಡೆ ನಾಯ್ಡು ಅವರನ್ನು ಬಂಧಿಸಿದರೆ, ಮತ್ತೊಂದೆಡೆ ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಲೋಕೇಶ್ ಕೇಂದ್ರ ಸಚಿವರಿಗೆ ತಿಳಿಸಿದ್ದಾರೆ. ಅವರ ತಾಯಿ ಭುವನೇಶ್ವರಿ ಮತ್ತು ಪತ್ನಿ ಬ್ರಾಹ್ಮಿಣಿಯವರಿಗೂ ತೊಂದರೆ ನೀಡಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೌಶಲ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾಗಿ ರಾಜಮಂಡ್ರಿಯ ಕೇಂದ್ರ ಕಾರಾಗೃಹದಲ್ಲಿರುವ ಚಂದ್ರಬಾಬು ನಾಯ್ಡು ಅವರ ಆರೋಗ್ಯವನ್ನು ಅಮಿತ್ ಶಾ ವಿಚಾರಿಸಿದ್ದಾರೆ ಎನ್ನಲಾಗಿದೆ.

ತಮ್ಮ ಹಾಗೂ ತಮ್ಮ ತಂದೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಅಮಿತ್ ಶಾ ಅವರಿಗೆ ಲೋಕೇಶ್ ವಿವರಿಸಿದ್ದಾರೆ. ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿ ಟಿಡಿಪಿ ಪ್ರಧಾನ ಕಾರ್ಯದರ್ಶಿಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಎರಡು ದಿನಗಳ ಕಾಲ ವಿಚಾರಣೆ ನಡೆಸಿದೆ.

ಅಮರಾವತಿ ಇನ್ನರ್ ರಿಂಗ್ ರೋಡ್ ಮತ್ತು ಎಪಿ ಫೈಬರ್ ನೆಟ್ ಪ್ರಕರಣಗಳಲ್ಲಿ ನಾಯ್ಡು ವಿರುದ್ಧ ಸಿಐಡಿ ಪ್ರಿಸನರ್ ಟ್ರಾನ್ಸಿಟ್ (ಪಿಟಿ) ವಾರಂಟ್‌ಗಳನ್ನು ಹೊರಡಿಸಿದೆ. ಅಲ್ಲದೆ, ಅಂಗಲ್ಲು ಹಿಂಸಾಚಾರ ಪ್ರಕರಣದಲ್ಲಿಯೂ ಟಿಡಿಪಿ ವರಿಷ್ಠರಿಗೆ ಬಂಧನದ ಭೀತಿ ಎದುರಾಗಿದೆ.

ಅಮಿತ್ ಶಾ ಅವರೊಂದಿಗಿನ ಸಭೆಯ ವೇಳೆ ಚಂದ್ರಬಾಬು ನಾಯ್ಡು ಅವರ ಸೊಸೆಯಾಗಿರುವ ಬಿಜೆಪಿಯ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷೆ ಡಿ. ಪುರಂದೇಶ್ವರಿ ಮತ್ತು ಬಿಜೆಪಿಯ ತೆಲಂಗಾಣ ಘಟಕದ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಉಪಸ್ಥಿತರಿದ್ದರು.

'ರಾಜ್ಯ ಸರ್ಕಾರ ಮತ್ತು ಆಡಳಿತದ ಚುಕ್ಕಾಣಿ ಹಿಡಿದಿರುವ ನಾಯಕರ ಸೇಡಿನ ಮನೋಭಾವದ ಬಗ್ಗೆ ಅಮಿತ್ ಶಾ ಅವರಿಗೆ ಲೋಕೇಶ್ ವಿಸ್ತಾರವಾಗಿ ವಿವರಿಸಿದ್ದಾರೆ. ಬಂಧನದ ಹಿಂದೆ ಬಿಜೆಪಿ ಇದ್ದಲ್ಲಿ ಲೋಕೇಶ್‌ಗೆ ಅಮಿತ್ ಶಾ ಅಪಾಯಿಂಟ್‌ಮೆಂಟ್ ಏಕೆ ನೀಡುತ್ತಾರೆ ಎಂಬುದಕ್ಕೆ ಕೇಂದ್ರದ ಮೇಲೆ ಆರೋಪ ಮಾಡುವವರು ಈಗ ಉತ್ತರಿಸಬೇಕಾಗಿದೆ' ಸಭೆಯ ನಂತರ ಪುರಂದೇಶ್ವರಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com