ನವದೆಹಲಿ: 2002ರ ಗೋಧ್ರಾ ನಂತರದ ಗಲಭೆಯಲ್ಲಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದ ಎಲ್ಲಾ 11 ಅಪರಾಧಿಗಳಿಗೆ ಕಳೆದ ವರ್ಷ ನೀಡಲಾದ ಕ್ಷಮಾಪಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಮೇಲಿನ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ಅವಧಿ ಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ.
ಈ ಹಿಂದೆ ಅಂತಿಮ ವಿಚಾರಣೆಗಾಗಿ ಪಟ್ಟಿ ಮಾಡಲಾಗಿದ್ದ ಅಪರಾಧಿಗಳ ಕ್ಷಮಾಪಣೆ ವಿರುದ್ಧದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಬಿಲ್ಕಿಸ್ ಬಾನು ಅವರ ವಕೀಲರು ಮತ್ತು ಕೇಂದ್ರದ ವಕೀಲರು, ಗುಜರಾತ್ ಸರ್ಕಾರ ಮತ್ತು ಪಿಐಎಲ್ ಅರ್ಜಿದಾರರ ವಾದಗಳನ್ನು ಆಲಿಸಿದ ನಂತರ, ಪೀಠವು ಆದೇಶವನ್ನು ಕಾಯ್ದಿರಿಸಿತು.
ಬಿಲ್ಕಿಸ್ ಬಾನು ಅವರು ಗುಜರಾತ್ ಸರ್ಕಾರದಿಂದ ಅಪರಾಧಿಗಳ ಅವಧಿ ಪೂರ್ವ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಹೊರತಾಗಿ, ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್ ಮತ್ತು ಲಖನೌ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಸೇರಿದಂತೆ ಹಲವಾರು ಮಂದಿ ಪಿಐಎಲ್‌ಗಳನ್ನು ಸಲ್ಲಿಸಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆ ಮತ್ತು ಅವರ ಅವಧಿಪೂರ್ವ ಬಿಡುಗಡೆಯ ವಿರುದ್ಧ ಪಿಐಎಲ್ ಸಲ್ಲಿಸಿದ್ದಾರೆ.
ಆರೋಪ ಸಾಬೀತಾಗಿ 11 ಅಪರಾಧಿಗಳು 15ಕ್ಕೂ ಹೆಚ್ಚು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಗುಜರಾತ್ ಸರ್ಕಾರ ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆಗೆ ಅನುಮತಿ ನೀಡಿತ್ತು. ಹೀಗಾಗಿ ಆಗಸ್ಟ್ 15ರಂದು ಅವರೆಲ್ಲರೂ ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಗುಜರಾತ್ ಸರ್ಕಾರವು ಪ್ರಕರಣದ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಅವರು ಕಳೆದ ನವೆಂಬರ್ 30 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳ ಬಿಡುಗಡೆಯು ಸಮಾಜದ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ ಎಂದು ಹೇಳಿದ್ದರು.
ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆಯ ಗುಜರಾತ್ ಸರ್ಕಾರದ ನಿರ್ಧಾರದ 'ಸನ್ನಡತೆ'ಯನ್ನು ಮಾತ್ರ ಪರಿಗಣಿಸುತ್ತಿದೆ ಎಂದು ಹೇಳಿದೆ.
Advertisement