ಲಾವೋಸ್‌ನಲ್ಲಿ ಒತ್ತೆಯಾಳಾದ ಒಡಿಶಾದ 35 ಕಾರ್ಮಿಕರು  ವಾಪಸ್ ಕರೆತರಲು ಅಧಿಕಾರಿಗಳಿಗೆ ಸಿಎಂ ಸೂಚನೆ

ಲಾವೋಸ್‌ನ ಅಟಾಪ್ಯೂ ಪ್ರಾಂತ್ಯದಲ್ಲಿ ಒಡಿಶಾದ ಕೇಂದ್ರಪಾರ ಜಿಲ್ಲೆಯ 35 ಕಾರ್ಮಿಕರನ್ನು ಉದ್ಯೋಗದಾತರು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ  ಎಂದು ವರದಿಯಾಗಿದೆ.
ಒಡಿಶಾದ ಒತ್ತೆಯಾಳು ಕಾರ್ಮಿಕರು
ಒಡಿಶಾದ ಒತ್ತೆಯಾಳು ಕಾರ್ಮಿಕರು

ಕೇಂದ್ರಪಾರ: ಲಾವೋಸ್‌ನ ಅಟಾಪ್ಯೂ ಪ್ರಾಂತ್ಯದಲ್ಲಿ ಒಡಿಶಾದ ಕೇಂದ್ರಪಾರ ಜಿಲ್ಲೆಯ 35 ಕಾರ್ಮಿಕರನ್ನು ಉದ್ಯೋಗದಾತರು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ  ಎಂದು ವರದಿಯಾಗಿದೆ. ಆಗ್ನೇಯ ಏಷ್ಯಾದ ದೇಶದಲ್ಲಿ ತಮ್ಮ ದುಃಸ್ಥಿತಿಯ ಬಗ್ಗೆ ಕಾರ್ಮಿಕರು ತಮ್ಮ ಕುಟುಂಬಗಳಿಗೆ ವೀಡಿಯೊ ಕಳುಹಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅಟ್ಟಪ್ಪುವಿನಲ್ಲಿ ಮರದ ಸಂಸ್ಕರಣಾ ಘಟಕದಲ್ಲಿ ಒತ್ತೆಯಾಳಾಗಿರುವ ಕಾರ್ಮಿಕರು, ಉದ್ಯೋಗದಾತರು ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'' ಆರು ತಿಂಗಳ ಹಿಂದೆ ಸ್ಥಳೀಯ ಕಾರ್ಮಿಕ ಗುತ್ತಿಗೆದಾರರ ಮೂಲಕ  ಲಾವೋಸ್ ಗೆ ತೆರಳಿದ್ದೇವು. ಸಂಬಳದೊಂದಿಗೆ ಉತ್ತಮ ಉದ್ಯೋಗಗಳ ಭರವಸೆ ನೀಡಿದ್ದರು. ಆದರೆ,  ನಾವು ಪ್ಲೈವುಡ್ ಕಾರ್ಖಾನೆಯಲ್ಲಿ ತೊಡಗಿಸಿಕೊಂಡಿದ್ದು, ಯಾವುದೇ ವೇತನವಿಲ್ಲದೆ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ದಿನಕ್ಕೆ ಒಂದು ಬಾರಿ ಆಹಾರವನ್ನು ನೀಡಲಾಗುತ್ತದೆ. ಹೆಚ್ಚಿನ ಆಹಾರಕ್ಕಾಗಿ ಬೇಡಿಕೆಯಿಟ್ಟರೆ ಮಾಲೀಕರು ನಮ್ಮನ್ನು ಥಳಿಸುತ್ತಾರೆ' ಎಂದು ಜಯನಗರ ಗ್ರಾಮದ ಕಾರ್ಮಿಕರೊಬ್ಬರಾದ ಸರೋಜಕುಮಾರ್ ಪಾಳೆ ವಿಡಿಯೋ ಸಂದೇಶದಲ್ಲಿ ಆರೋಪಿಸಿದ್ದಾರೆ.

ಕಟಾನಾ ಗ್ರಾಮದ ಮತ್ತೋರ್ವ ಕಾರ್ಮಿಕ ಮಲಯ ಬೆಹೆರಾ, ದಿನಕ್ಕೆ 12ರಿಂದ 14 ಗಂಟೆ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ನಾವು ಭಾರತದಲ್ಲಿನ ನಮ್ಮ ಏಜೆಂಟರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಿತ್ರಹಿಂಸೆಯ ಬಗ್ಗೆ ತಿಳಿಸಿದೆವು. ಆದರೆ ಅವರು ಗಮನ ಹರಿಸುತ್ತಿಲ್ಲ ಎದು ತಿಳಿಸಿದರು.  ಪ್ಲೈವುಡ್ ಕಂಪನಿಯ ಮಾಲೀಕರು  ಕಾರ್ಮಿಕರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಕೊಯಿಲಿಪುರದ ಅಂಜನ್ ಕುಮಾರ್ ನಾಯಕ್ ಹೇಳಿದ್ದಾರೆ. ಎಲ್ಲಾ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಲು ಸಹಾಯ ಮಾಡುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಮನವಿ ಮಾಡಿದ್ದಾರೆ.

ಗುರುವಾರ ಕಾರ್ಮಿಕರ ಕುಟುಂಬ ಸದಸ್ಯರು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸುರಕ್ಷಿತವಾಗಿ ಮರಳಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಪ್ರತಿಯೊಬ್ಬ ಯುವಕರು ಸಾರಿಗೆ ವೆಚ್ಚಕ್ಕಾಗಿ 1.50 ಲಕ್ಷ ರೂಪಾಯಿ ಪಾವತಿಸಿದ್ದಾರೆ ಮತ್ತು ಏಜೆಂಟ್ ತಿಂಗಳಿಗೆ 70,000 ರೂಪಾಯಿ ಸಂಬಳ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಅವರು ಹೇಳಿದ್ದಾರೆ. 

ಇದು ರಾಜ್ಯ ಸರ್ಕಾರದ ಗಮನಕ್ಕೆ ತಂದ ನಂತರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಮನೆಗೆ ಕರೆತರಲು ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯ ಕಾರ್ಮಿಕ ಆಯುಕ್ತರು ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ಸಿಎಂಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಮಿಕರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಯಭಾರ ಕಚೇರಿ ಒಡಿಶಾ ಸರ್ಕಾರಕ್ಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com