ಪಾಕ್ ಆಟಗಾರನ ಮುಂದೆ 'ಜೈ ಶ್ರೀರಾಮ್' ಘೋಷಣೆ: ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಕಿಡಿ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರ ಮುಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ರೂಮ್‌ಗೆ ತೆರಳುತ್ತಿದ್ದಾಗ, ಅಲ್ಲಿಂದ ಪ್ರೇಕ್ಷಕರು 'ಜೈಶ್ರೀ ರಾಮ್' ಘೋಷಣೆಗಳನ್ನು ಕೂಗಿದ್ದು, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಅಭಿಮಾನಿಗಳ ಈ ವರ್ತನೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಉದಯನಿಧಿ ಸ್ಟಾಲಿನ್
ಉದಯನಿಧಿ ಸ್ಟಾಲಿನ್

ಚೆನ್ನೈ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರ ಮುಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ರೂಮ್‌ಗೆ ತೆರಳುತ್ತಿದ್ದಾಗ, ಅಲ್ಲಿಂದ ಪ್ರೇಕ್ಷಕರು 'ಜೈ ಶ್ರೀರಾಮ್' ಘೋಷಣೆಗಳನ್ನು ಕೂಗಿದ್ದು, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಅಭಿಮಾನಿಗಳ ಈ ವರ್ತನೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಉದಯನಿಧಿ ಸ್ಟಾಲಿನ್, 'ಭಾರತವು ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಹೆಸರಾಗಿದೆ. ಆದರೆ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಆಟಗಾರರಿಗೆ ನೀಡಿದ ಆತಿಥ್ಯವು ಸ್ವೀಕಾರಾರ್ಹವಲ್ಲ ಮತ್ತು ಇದು ಅತ್ಯಂತ ಕೀಳುಮಟ್ಟದ ನಡವಳಿಕೆ. ಕ್ರೀಡೆಗಳು ಎಲ್ಲಾ ಅಡೆಗಳನ್ನು ಮೀರಿ ಏಕೀಕರಣಗೊಳ್ಳಬೇಕು. ದೇಶಗಳ ನಡುವಿನ ಸಂಬಂಧವನ್ನು ಬಲಗೊಳಿಸಬೇಕು ಹೊರತು, ದ್ವೇಷವನ್ನು ಹರಡುವ ಸಾಧನವಾಗಿ ಬಳಸುವುದು ಖಂಡನೀಯ' ಎಂದಿದ್ದಾರೆ.

ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಡಿ ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು ಈ ನಡೆಯನ್ನು ಖಂಡಿಸಿದ್ದು, 'ಮುಂದಿನ 10 ದಿನಗಳಲ್ಲಿ ಪಾಕಿಸ್ತಾನದ ತಂಡ ಚೆನ್ನೈನಲ್ಲಿ 2 ಪಂದ್ಯಗಳನ್ನು ಆಡಲಿದೆ. ಈ ವೇಳೆ ಅಲ್ಲಿಗೆ ತೆರಳುವವರು ಆ ತಂಡವನ್ನು (ಪಾಕಿಸ್ತಾನ) ಆತ್ಮೀಯವಾಗಿ ಸ್ವಾಗತಿಸಿ. ಅವರು ಏನು ಮಾಡುತ್ತಿದ್ದಾರೋ ಅದನ್ನು ಗೌರವಿಸಿ. ಪ್ರತಿಯೊಬ್ಬರನ್ನು ಪ್ರೀತಿಸಿ ಮತ್ತು ಗೌರವಿಸಿ! ಬಾಬರ್ ಅಜಮ್ ಅವರಿಗೆ ಆದ ಅನುಭವವನ್ನು ಸರಿದೂಗಿಸಲು, ಮತ್ತೆ ಇಂತಹ ಘಟನೆ ಮರುಕಳಿಸದಂತೆ ನನ್ನ ನಗರ ನೋಡಿಕೊಳ್ಳುತ್ತದೆ ಎಂದು ನಾನು ನಂಬುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಟಾಸ್‌ ವೇಳೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರು ಭಾಷಣ ಮಾಡುತ್ತಿದ್ದಾಗಲೂ, ಅಲ್ಲಿದ್ದ ಅಭಿಮಾನಿಗಳು ಬೊಬ್ಬೆ ಹೊಡೆಯುತ್ತಿದ್ದರು. ಈಮಧ್ಯೆ, ಭಾರತ ತಂಡವು ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದ್ದು, ಪಂದ್ಯದ ನಂತರ, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಅಜಮ್‌ಗೆ ತಾವು ಸಹಿ ಮಾಡಿದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ಈ ವರ್ಷದ ಆರಂಭದಲ್ಲಿ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು. ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿಯೂ ಅಭಿಮಾನಿಗಳು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com