ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ: ಬಿಜೆಪಿ ಆರೋಪ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು ಮಾತ್ರವಲ್ಲದೇ ಈ ಸಂಬಂಧ ಸ್ಪೀಕರ್ ಗೆ ಪತ್ರ ಕೂಡ ನೀಡಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ
ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು ಮಾತ್ರವಲ್ಲದೇ ಈ ಸಂಬಂಧ ಸ್ಪೀಕರ್ ಗೆ ಪತ್ರ ಕೂಡ ನೀಡಿದ್ದಾರೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಮೇಲೆ ಸದನದಲ್ಲಿ ಹಣಕ್ಕೆ ಪ್ರಶ್ನೆ ಕೇಳಿದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಬಿಜೆಪಿ ಸಂಸದ ಲೋಕಸಭೆ ಸ್ಪೀಕರ್​ಗೆ ಪತ್ರ ಬರೆದಿದ್ದಾರೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಈ ಗಂಭೀರ ಆರೋಪ ಮಾಡಿದ್ದು, ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದನಿರಿಂದ ಹಣ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ತಕ್ಷಣದಿಂದಲೇ ಅವರನ್ನು ಅಮಾನತಿನಲ್ಲಿಡಬೇಕು ಎಂದು ಅಗ್ರಹಿಸಿದ್ದಾರೆ.

ಅಲ್ಲದೆ ನಿಶಿಕಾಂತ್ ದುಬೆ ಈ ಸಂಬಂಧ ಲೋಕಸಭೆ ಸ್ಪೀಕರ್​ಗೆ ಭಾನುವಾರ ಪತ್ರ ಕೂಡ ಬರೆದಿದ್ದಾರೆ. ಭಾನುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ, ಟಿಎಂಸಿ ಸಂಸದೆ ಮೊಯಿತ್ರಾ ಅವರು ಸದನದಲ್ಲಿ 61 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳನ್ನ ಉದ್ಯಮಿಯೊಬ್ಬರ ಕಂಪನಿಯ ಪರವಾಗಿಯೇ ಕೇಳಿದ್ದಾರೆ. ಇದಕ್ಕಾಗಿ ಅವರು ಲಂಚದ ರೂಪದಲ್ಲಿ ಹಣ ಮತ್ತು ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ ಎಂದು ಕೆಲ ದಾಖಲೆಗಳನ್ನೂ ನೀಡಿದ್ದಾರೆ.

ಪ್ರಧಾನಿ ಮೋದಿ, ಅಮಿತ್ ಶಾ ಟಾರ್ಗೆಟ್​
ಅಂತೆಯೇ ಇಡೀ ಪಿತೂರಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ ಎಂದು ಹೇಳಿರುವ ದುಬೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಸರ್ಕಾರವನ್ನು ಟೀಕಿಸಲೆಂದೇ ಅವರು ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಮತ್ತು ಮಾಹಿತಿಯನ್ನು ಉದ್ಯಮಿಗಳೊಂದಿಗೆ ಸಂಸದೆ ಹಂಚಿಕೊಂಡಿದ್ದಾರೆ.

ಈ ದಾಖಲೆಗಳನ್ನೂ ಪತ್ರದೊಂದಿಗೆ ಲಗತ್ತಿಸಿರುವುದಾಗಿ ದುಬೆ ತಿಳಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳನ್ನು ಪರಿಶೀಲಿಸಿದ ಬಳಿಕ ಟಿಎಂಸಿ ಸಂಸದೆ ಉದ್ಯಮಿ ಮತ್ತು ಕಂಪನಿಯ ಪರವಾಗಿ ಪ್ರಶ್ನೆ ಕೇಳಿದ್ದು ತಿಳಿದುಬಂದಿದೆ. ಇದೊಂದು ಕ್ರಿಮಿನಲ್ ಪಿತೂರಿಯಾಗಿದ್ದು, ಸಂವಿಧಾನ ನೀಡಿದ ಸವಲತ್ತು ಮತ್ತು ಹಕ್ಕನ್ನು ಅವರು ಉಲ್ಲಂಘಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 120A ಪ್ರಕಾರ ಇದು ಕ್ರಿಮಿನಲ್ ಅಪರಾಧ ಕೂಡ ಎಂದು ದುಬೆ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com