ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಹಿಂಪಡೆಯಲು 'ಸುಪ್ರೀಂ' ನಕಾರ

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. 
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. 

ಡಿಕೆ ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸುಪ್ರೀಂ ಕೋರ್ಟ್‍‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠವು, ಸಿಬಿಐ ಮೇಲ್ಮನವಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಇದಕ್ಕೂ ಮುನ್ನ ಜುಲೈನಲ್ಲಿ ಕಾಂಗ್ರೆಸ್ ನಾಯಕನ ವಿರುದ್ಧ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

ಫೆಬ್ರುವರಿಯಲ್ಲಿ, ಡಿಕೆ ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿತ್ತು.

ಏನಿದು ಪ್ರಕರಣ?

ಡಿಕೆ ಶಿವಕುಮಾರ್ ಅವರು 2013 ರಿಂದ 2018ರ ನಡುವಿನ ಅವಧಿಯಲ್ಲಿ ತಮ್ಮ ಆದಾಯಕ್ಕೂ ಮೀರಿದ ಸಂಪತ್ತು ಗಳಿಸಿದ್ದಾರೆ ಎಂದು ಆರೋಪಿಸಿ ಸಿಬಿಐ, ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅಕ್ಟೋಬರ್ 3 ರಂದು ಪ್ರಕರಣ ದಾಖಲಿಸಿದೆ.

2017ರಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧದ ಬಳಿಕ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com