ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ದೂರು; ನಿಶಿಕಾಂತ್ ದುಬೆ, ವಕೀಲರಿಗೆ ಲೋಕಸಭೆ ನೈತಿಕ ಸಮಿತಿ ಸಮನ್ಸ್

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಲೋಕಸಭೆಯ ನೈತಿಕ ಸಮಿತಿಯು ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರು ಅಕ್ಟೋಬರ್ 26ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ - ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ಬಿಜೆಪಿ ಸಂಸದ ನಿಶಿಕಾಂತ್ ದುಬೆ - ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಲೋಕಸಭೆಯ ನೈತಿಕ ಸಮಿತಿಯು ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರು ತಮ್ಮ ವಾದ ಮಂಡಿಸಲು ಅಕ್ಟೋಬರ್ 26ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ನಗದು ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಅಕ್ಟೋಬರ್ 15ರಂದು ನೀಡಿರುವ ದೂರನ್ನು ಲೋಕಸಭೆಯ ಸಚಿವಾಲಯವು ಅಂಗೀಕರಿಸುತ್ತಿದೆ ಎಂದು ಲೋಕಸಭೆಯ ಸಚಿವಾಲಯ ತಿಳಿಸಿದೆ.

ಸಚಿವಾಲಯದ ಅಧಿಕಾರಿಯೊಬ್ಬರು ಕಳುಹಿಸಿರುವ ಪತ್ರದಲ್ಲಿ, 'ಅಕ್ಟೋಬರ್ 26 ರ ಗುರುವಾರದಂದು ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ವಾದವನ್ನು ವೈಯಕ್ತಿಕವಾಗಿ ಆಲಿಸಲು ನೈತಿಕ ಸಮಿತಿಯು ನಿರ್ಧರಿಸಿದೆ ಎಂದು ಹೇಳಲು ನನಗೆ ನಿರ್ದೇಶಿಸಲಾಗಿದೆ' ಎಂದು ಹೇಳಿದೆ.

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಮಹುವಾ ಮೊಯಿತ್ರಾ ಅವರು "ಲಂಚ" ಪಡೆದಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ ಮತ್ತು ಅವರ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಪರಿಶೀಲಿಸಲು "ವಿಚಾರಣಾ ಸಮಿತಿ" ರಚಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೊಯಿತ್ರಾ ಅವರು, ಅವರ (ದುಬೆ) ವಿರುದ್ಧ ಬಾಕಿ ಉಳಿದಿರುವ ಆರೋಪಗಳ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತನಿಖೆ ನಡೆಸಿದ ನಂತರ ತಮ್ಮ ವಿರುದ್ಧದ ಯಾವುದೇ ಕ್ರಮವನ್ನು ನಾನು ಸ್ವಾಗತಿಸುತ್ತೇನೆ' ಎಂದು ಹೇಳಿದ್ದಾರೆ.

ದುಬೆ, ದೆಹದ್ರಾಯ್ ಮತ್ತು ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳು ತನ್ನ ವಿರುದ್ಧ ಯಾವುದೇ ಆಪಾದಿತ ನಕಲಿ ಮತ್ತು ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡದಂತೆ, ಪ್ರಸಾರ ಮಾಡದಂತೆ ಅಥವಾ ಪ್ರಕಟಿಸದಂತೆ ತಡೆಯಬೇಕೆಂದು ಮೊಯಿತ್ರಾ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಮೊಯಿತ್ರಾ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ನೀಡಿದ ದೂರಿನಲ್ಲಿ, ವಕೀಲ ಅನಂತ್ ದೇಹದ್ರಾಯ್ ಎಂಬುವವರು ಸಿಬಿಐಗೆ ನೀಡಿರುವ ದೂರಿನಲ್ಲಿರುವ ಮಾಹಿತಿ ಆಧರಿಸಿ ಸ್ಪೀಕರ್‌ಗೆ ದೂರು ನೀಡಿರುವುದಾಗಿ ದುಬೆ ತಿಳಿಸಿದ್ದಾರೆ. ಮೊಯಿತ್ರಾ ಅವರನ್ನು ಕೂಡಲೇ ಅಮಾನತು ಮಾಡಿ, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಲೋಕಸಭೆಯಲ್ಲಿ ಮೊಯಿತ್ರಾ ಅವರು ಕೇಳಿರುವ 61 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳು ಅದಾನಿ ಗ್ರೂಪ್‌ನ ಮೇಲೆ ಕೇಂದ್ರೀಕೃತವಾಗಿವೆ. ಪ್ರತಿಸ್ಪರ್ಧಿ ಉದ್ಯಮಿಯೊಬ್ಬರ ಇಚ್ಛೆಯ ಮೇರೆಗೆ ಟಿಎಂಸಿ ಸಂಸದೆ ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com