ಕಾಂಗ್ರೆಸ್ ಮೋಸ ಮಾಡಿದೆ ಎಂದ ಅಖಿಲೇಶ್ ಯಾದವ್: ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು?

ಬಿಜೆಪಿ ವಿರುದ್ಧ ಹೋರಾಡಲು ಒಗ್ಗೂಡಿದ್ದ ಪ್ರತಿಪಕ್ಷಗಳ ‘ಐಎನ್‌ಡಿಐಎ’ ಮೈತ್ರಿಕೂಟ ಪಂಚ ರಾಜ್ಯಗಳ ಚುನಾವಣೆ ಹೊತ್ತಲ್ಲೇ ಒಡಕಿನ ಹಾದಿಯಲ್ಲಿ ಸಾಗಿದೆ.
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Updated on

ಲಕ್ನೋ: ಬಿಜೆಪಿ ವಿರುದ್ಧ ಹೋರಾಡಲು ಒಗ್ಗೂಡಿದ್ದ ಪ್ರತಿಪಕ್ಷಗಳ ‘ಐಎನ್‌ಡಿಐಎ’ ಮೈತ್ರಿಕೂಟ ಪಂಚ ರಾಜ್ಯಗಳ ಚುನಾವಣೆ ಹೊತ್ತಲ್ಲೇ ಒಡಕಿನ ಹಾದಿಯಲ್ಲಿ ಸಾಗಿದೆ.

ಕಾಂಗ್ರೆಸ್ ಪಕ್ಷವು ತಮಗೆ ಮೋಸ ಮಾಡಿ, ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಉತ್ತರ ಪ್ರದೇಶ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ. ಇದರೊಂದಿಗೆ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದಲ್ಲಿ ಬಿರುಕು ಮೂಡಿದಂತಾಗಿದೆ.

ಕಾಂಗ್ರೆಸ್‌ ಇತರೆ ಪಕ್ಷಗಳನ್ನು ಲಘವಾಗಿ ಪರಿಗಣಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಇದೇ ಮನೋಧರ್ಮವನ್ನು ಕಾಂಗ್ರೆಸ್‌ ಮುಂದುವರಿಸಿದರೆ ಮೈತ್ರಿಯಲ್ಲಿ ಮುಂದುವರಿಯುವ ಬಗ್ಗೆ ಮರು ಚಿಂತನೆ ನಡೆಸಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಸಮಾಜವಾದಿ ಪಕ್ಷದ ಬಗ್ಗೆ ಕಾಂಗ್ರೆಸ್‌ ತೆಗೆದಿರುವ ತಕರಾರಿಗೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್‌ ಯಾದವ್‌, ಕಾಂಗ್ರೆಸ್‌ ನಾಯಕರ ಧೋರಣೆ ಐಎನ್‌ಡಿಐಎ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಎಂಬಂತಿದೆ. ಕಾಂಗ್ರೆಸ್‌ ಚಿಂತನೆ ಇದೇ ಆಗಿದ್ದರೆ ವಿಧಾನಸಭಾ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್‌ 17ರಂದು ಚುನಾವಣೆ ನಿಗದಿಯಾಗಿದೆ. ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ. ಉತ್ತರ ಪ್ರದೇಶದ ಸಿತಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಕಾಂಗ್ರೆಸ್‌ ನಾಯಕರು ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಆ ಪಕ್ಷ ನಮಗೆ ಮೋಸ ಮಾಡಿದೆ.

'ಇಂಡಿಯಾ' ಮೈತ್ರಿಕೂಟ ವಿಧಾನಸಭೆ ಚುನಾವಣೆಗಳಿಗಾಗಿ ಅಲ್ಲ ಎಂಬುದು ಗೊತ್ತಿದೆ. ಕಾಂಗ್ರೆಸ್‌ನವರು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ವೇಳೆ ಆರು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಭರವಸೆ ನೀಡಿದ ಮೇಲೆ ಆ ಪಕ್ಷದ ನಾಯಕ ಕಮಲನಾಥ್ ಅವರನ್ನು ಭೇಟಿ ಮಾಡಲು ಸಮಾಜವಾದಿ ಪಕ್ಷದ ನಾಯಕರನ್ನು ಕಳುಹಿಸಲಾಗಿತ್ತು. ಆದರೆ, ಅವರು ನಮ್ಮನ್ನು ವಂಚಿಸಿದ್ದಾರೆ' ಎಂದು ದೂರಿದ್ದಾರೆ.

'ಕಾಂಗ್ರೆಸ್ ನಾಯಕರು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ' ಎಂದು ಬೇಸರದಿಂದ ಹೇಳಿರುವ ಅವರು, 'ಕಾಂಗ್ರೆಸ್‌ ನಮಗೇನು ಮಾಡಿದೆಯೋ ಅದನ್ನೇ ನಾವೂ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com