ಇಂಡಿಯಾ ಮೈತ್ರಿ ರಾಜಸ್ಥಾನ, ಕರ್ನಾಟಕ, ಛತ್ತೀಸ್‌ಗಢ ಮಾದರಿ ಆಡಳಿತವನ್ನು ಕೇಂದ್ರದಲ್ಲಿ ಅಳವಡಿಸಿಕೊಳ್ಳಲಿದೆ: ರಾಹುಲ್ ಗಾಂಧಿ

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢ ಮಾದರಿಯ ಆಡಳಿತವನ್ನು ಅಳವಡಿಸಿಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಐಜ್ವಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಐಜ್ವಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಐಜ್ವಾಲ್: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜಸ್ಥಾನ, ಕರ್ನಾಟಕ ಮತ್ತು ಛತ್ತೀಸ್‌ಗಢ ಮಾದರಿಯ ಆಡಳಿತವನ್ನು ಅಳವಡಿಸಿಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಐಜ್ವಾಲ್‌ನಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದ ಅವರು, ರಾಜಸ್ಥಾನದ 25 ಲಕ್ಷ ರೂ.ಗಳ ಆರೋಗ್ಯ ವಿಮೆಯು ವಿಶ್ವದಲ್ಲೇ ಅತ್ಯುತ್ತಮವಾಗಿದ್ದರೆ, ಕರ್ನಾಟಕದಲ್ಲಿ ಐದು ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಛತ್ತೀಸ್‌ಗಢದಲ್ಲಿ ರೈತರ ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಯೋಜನೆಗಳು ದೇಶದಲ್ಲೇ ಅತ್ಯುತ್ತಮವಾಗಿವೆ ಎಂದು ಅವರು ಹೇಳಿದರು.

ಈ ರಾಜ್ಯಗಳಲ್ಲಿನ ನಮ್ಮ ಸರ್ಕಾರಗಳು ಮತ್ತು ನಾಯಕರು ವಿಭಿನ್ನ ದೃಷ್ಟಿಕೋನದಿಂದ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರದ ವಿಕೇಂದ್ರೀಕರಣವನ್ನು ಬಯಸುತ್ತದೆ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್ ರಾಜ್ಯಗಳನ್ನು ನಿಯಂತ್ರಿಸಲು ಅಧಿಕಾರ ಕೇಂದ್ರೀಕರಣದ ಗುರಿಯನ್ನು ಹೊಂದಿದೆ ಎಂದು ದೂರಿದರು.

ಅವರಿಗೆ (ಬಿಜೆಪಿ) ಒಂದೇ ಧರ್ಮ, ಭಾಷೆ ಮತ್ತು ಸಂಸ್ಕೃತಿ ಬೇಕು. ಎಲ್ಲಾ ಸಂಸ್ಕೃತಿಗಳು, ಎಲ್ಲಾ ಧರ್ಮಗಳು ಮತ್ತು ಎಲ್ಲಾ ಭಾಷೆಗಳನ್ನು ರಕ್ಷಿಸಬೇಕೆಂದು ನಾವು ಬಯಸುತ್ತೇವೆ. ಬಿಜೆಪಿ ದೇಶದ ಎಲ್ಲಾ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆರ್‌ಎಸ್‌ಎಸ್‌ ಒಂದು ಸಿದ್ಧಾಂತವನ್ನು ನಂಬುತ್ತದೆ. ನಾವು ಇದನ್ನು ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಇಂಡಿಯಾ ಮೈತ್ರಿಕೂಟವು ಭಾರತದ ಶೇ 60 ರಷ್ಟನ್ನು ಪ್ರತಿನಿಧಿಸುತ್ತದೆ. ಮಹಾತ್ಮಾ ಗಾಂಧಿಯವರ ಕಾಲದಿಂದಲೂ ನಾವು ಎಲ್ಲಾ ಧರ್ಮಗಳು, ಸಂಸ್ಕೃತಿಗಳು ಮತ್ತು ಭಾಷೆಗಳನ್ನು ರಕ್ಷಿಸುತ್ತಿದ್ದೇವೆ. ನಾವು 1920 ರಲ್ಲಿ ಆರ್‌ಎಸ್‌ಎಸ್ ಸ್ಥಾಪನೆಯಾದಾಗಿನಿಂದ ಅದರ ವಿರುದ್ಧ ಹೋರಾಡುತ್ತಿದ್ದೇವೆ ಎಂದರು.

ಜಿಎಸ್‌ಟಿ, ನೋಟು ಅಮಾನ್ಯೀಕರಣ ಮತ್ತು ಕೃಷಿ ಕಾನೂನುಗಳನ್ನು ಅದಾನಿ ಮತ್ತು ದೊಡ್ಡ ಉದ್ಯಮಿಗಳಿಗೆ ಸಹಾಯ ಮಾಡಲು ಮತ್ತು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ. ಬಿಜೆಪಿಯು ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಾಶಪಡಿಸಿತು. ಅದಾನಿ ಮತ್ತು ದೊಡ್ಡ ಉದ್ಯಮಿಗಳಿಗೆ ದೊಡ್ಡ ಲಾಭವನ್ನು ಮಾಡಿಕೊಟ್ಟಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಉದ್ಯಮಗಳನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.

ಬಿಜೆಪಿಯಲ್ಲಿ ವಂಶಾಡಳಿತದ ರಾಜಕೀಯದ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ಬಿಜೆಪಿ ನಾಯಕರ ಮಕ್ಕಳು ರಾಜಕೀಯದಲ್ಲಿದ್ದಾರೆ.

ಕಾಂಗ್ರೆಸ್‌ಅನ್ನು ಅಳಿವಿನ ಅಂಚಿನಲ್ಲಿರುವ ಪಕ್ಷವೆಂದು ಬಿಂಬಿಸುವ ಸಾಮಾನ್ಯ ಪ್ರವೃತ್ತಿ ಇದೆ. ಆದರೆ, ನಾವು ಕರ್ನಾಟಕ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆ. ವಿಧಾನಸಭೆ ಚುನಾವಣೆ ನಡೆಯಲಿರುವ (ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ) ಎಲ್ಲಾ ರಾಜ್ಯಗಳಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ಅವರು ಹೇಳಿದರು.

ಭಾರತದ ಇತರ ಸಾಂವಿಧಾನಿಕ ಸಂಸ್ಥೆಗಳಂತೆ ಬಿಜೆಪಿಯು ಮಾಧ್ಯಮವನ್ನು ಸಹ ನಿಯಂತ್ರಿಸುತ್ತದೆ. 'ಕಾಂಗ್ರೆಸ್ ಪಕ್ಷವು ದೇಶಕ್ಕೆ ಅಡಿಪಾಯ ಹಾಕಿದೆ ಮತ್ತು ದೇಶದ ನೀತಿಯನ್ನು ರಕ್ಷಿಸುವ ದಾಖಲೆಯನ್ನು ಹೊಂದಿದೆ. ಪ್ಯಾಲೆಸ್ತೀನ್-ಇಸ್ರೇಲ್ ಕುರಿತು ನಮ್ಮ ನಿರ್ಣಯವು ತುಂಬಾ ಸ್ಪಷ್ಟವಾಗಿದೆ. ನಾವು ಹಿಂಸೆಯ ವಿರುದ್ಧವಾಗಿದ್ದೇವೆ. ಅಮಾಯಕರನ್ನು ಕೊಲ್ಲುವ ಯಾರಾದರೂ ಅದು ಅಪರಾಧವೇ ಆಗಿರುತ್ತದೆ' ಎಂದು ಅವರು ಗಮನಸೆಳೆದರು.

ಎರಡು ದಿನಗಳ ಭೇಟಿಗಾಗಿ ಸೋಮವಾರ ಮಿಜೋರಾಂಗೆ ಆಗಮಿಸಿದ ರಾಹುಲ್ ಗಾಂಧಿ, ರಾಜ್ಯ ರಾಜಧಾನಿಯ ಚನ್ಮಾರಿ ಪಟ್ಟಣ ಪ್ರದೇಶದಿಂದ ರಾಜಭವನದವರೆಗೆ ಎರಡು ಕಿಮೀ ಉದ್ದದ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಸಂಜೆ ಐಜ್ವಾಲ್‌ನ ಲಾಲ್ ಥನ್ಹಾವ್ಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಮಂಗಳವಾರ ತ್ರಿಪುರಾ ರಾಜಧಾನಿ ಅಗರ್ತಲಾ ಮೂಲಕ ದೆಹಲಿಗೆ ಹಿಂದಿರುಗುವ ಮೊದಲು ಲುಂಗ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com