ಮಹುವಾ ಮೊಯಿತ್ರಾ ಭಾರತದಲ್ಲಿದ್ದಾಗ ಅವರ ಸಂಸದರ ಗುರುತಿನ ಚೀಟಿ ದುಬೈನಲ್ಲಿ ಬಳಕೆಯಾಗಿದೆ: ನಿಶಿಕಾಂತ್ ದುಬೆ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿಯ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಶನಿವಾರ ಹೊಸ ಆರೋಪ ಮಾಡಿದ್ದು, ಸಂಸದರೊಬ್ಬರು ಭಾರತದಲ್ಲಿದ್ದರೂ, ಅವರ ಸಂಸದರ ಗುರುತಿನ ಚೀಟಿ ದುಬೈನಲ್ಲಿ ಬಳಕೆಯಾಗಿದೆ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ತನಿಖಾ ಸಂಸ್ಥೆಗಳಿಗೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
ನಿಶಿಕಾಂತ್ ದುಬೆ
ನಿಶಿಕಾಂತ್ ದುಬೆ

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿಯ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಶನಿವಾರ ಹೊಸ ಆರೋಪ ಮಾಡಿದ್ದು, ಸಂಸದರೊಬ್ಬರು ಭಾರತದಲ್ಲಿದ್ದರೂ, ಅವರ ಸಂಸದರ ಗುರುತಿನ ಚೀಟಿ ದುಬೈನಲ್ಲಿ ಬಳಕೆಯಾಗಿದೆ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ತನಿಖಾ ಸಂಸ್ಥೆಗಳಿಗೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, 'ಸಂಸದರೊಬ್ಬರು ಸ್ವಲ್ಪ ಹಣಕ್ಕಾಗಿ ದೇಶದ ಭದ್ರತೆಯನ್ನೇ ಗಿರವಿ ಇಟ್ಟಿದ್ದಾರೆ' ಎಂದು ಆರೋಪಿಸಿದ್ದಾರೆ.

'ಆ ಸಂಸದೆ ಭಾರತದಲ್ಲಿದ್ದರೂ ಕೂಡ, ಅವರ ಸಂಸದರ ಗುರುತಿನ ಚೀಟಿಯು ದುಬೈನಲ್ಲಿ ಬಳಕೆಯಾಗಿದೆ. ದೇಶದ ಪ್ರಧಾನಿ, ಹಣಕಾಸು ಇಲಾಖೆ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ಸೇರಿದಂತೆ ಇಡೀ ಭಾರತ ಸರ್ಕಾರವೇ ಈ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ' ಎಂದು ಹೇಳಿದ್ದಾರೆ.

'ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಪ್ರತಿಪಕ್ಷಗಳು ಇನ್ನೂ ರಾಜಕೀಯ ಮಾಡುವ ಅಗತ್ಯವಿದೆಯೇ?. ಜನರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಎನ್‌ಐಸಿ ಈ ಮಾಹಿತಿಯನ್ನು ತನಿಖಾ ಸಂಸ್ಥೆಗೆ ನೀಡಿದೆ' ಎಂದು ದುಬೆ ಹೇಳಿದ್ದಾರೆ. ಆದರೆ, ಯಾವ ತನಿಖಾ ಸಂಸ್ಥೆಗೆ ಎಂಬುದನ್ನು ಹೆಸರಿಸಿಲ್ಲ.

ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆಜ್ಞೆಯ ಮೇರೆಗೆ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರು ಹಣ ಸ್ವೀಕರಿಸಿದ್ದಾರೆ ಎಂದು ಆರೋಪಿಸಿರುವ ದುಬೆ, ತಮ್ಮ ಪೋಸ್ಟ್‌ನಲ್ಲಿ ನೇರವಾಗಿ ಅವರನ್ನು ಹೆಸರಿಸಿಲ್ಲ.

ಲೋಕಸಭೆಯ ನೈತಿಕ ಸಮಿತಿಯು ದುಬೆ ಅವರ ದೂರನ್ನು ಪರಿಶೀಲಿಸುತ್ತಿದೆ ಮತ್ತು 'ಮೌಖಿಕ ಸಾಕ್ಷ್ಯ' ದಾಖಲಿಸಿಕೊಳ್ಳಲು ಅಕ್ಟೋಬರ್ 26 ರಂದು ತನ್ನ ಮುಂದೆ ಹಾಜರಾಗುವಂತೆ ನಿಶಿಕಾಂತ್ ದುಬೆ ಮತ್ತು ವಕೀಲರಿಗೆ ಸೂಚಿಸಿದೆ.

ಏನಿದು ಪ್ರಕರಣ?

ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ಈ ಬಗ್ಗೆ ತನಿಖಾ ಸಮತಿ ರಚನೆ ಮಾಡಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದಾರೆ. 

ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹೀರಾನಂದಾನಿ ಸಮೂಹದ ಸಿಇಒ ದರ್ಶನ್ ಹೀರಾನಂದಾನಿ ಅವರಿಂದ ಮಹುವಾ ಅವರು ಲಂಚ ಪಡೆದಿದ್ದಾರೆ ಎಂದು ದುಬೆ ಸ್ಪೀಕರ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ದೂರಿದ್ದಾರೆ. ದುಬೆ ಅವರ ದೂರನ್ನು ಸ್ಪೀಕರ್, ಸಂಸತ್ತಿನ ನೈತಿಕ ಸಮಿತಿಗೆ ಒಪ್ಪಿಸಿದ್ದಾರೆ.

ಮೊಯಿತ್ರಾ ಅವರು ಅದಾನಿ ಗ್ರೂಪ್ ಮತ್ತು ದುಬೆ ವಿರುದ್ಧ ದಾಳಿಯನ್ನು ಮುಂದುವರೆಸಿದ್ದಾರೆ ಮತ್ತು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

'ಒಂದು ವೇಳೆ ವಿಚಾರಣೆಗೆ ಕರೆದರೆ ಸಿಬಿಐ ಅಥವಾ ಸದನದ ಸಮಿತಿ ಮುಂದೆ ಹಾಜರಾಗುತ್ತೇನೆ ಮತ್ತು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಅದಾನಿ ನಿರ್ದೇಶಿತ ಮಾಧ್ಯಮ ಹಾಗೂ ಬಿಜೆಪಿಯ ಟ್ರೋಲ್‌ಗಳಿಗೆ ಉತ್ತರಿಸಲು ನನ್ನ ಬಳಿ ಸಮಯವಿಲ್ಲ. ನಾನು ನಾಡಿಯಾದಲ್ಲಿ ದುರ್ಗಾ ಪೂಜೆಯ ಸಂಭ್ರಮದಲ್ಲಿದ್ದೇನೆ. ಶುಭೋ ಶಾಂತಿ' ಎಂದು ಮಹುವಾ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com