ದುಮ್ಕಾ: ಮೋಟಾರು ಸೈಕಲ್ ಆಕಸ್ಮಿಕವಾಗಿ ಎಮ್ಮೆ ಡಿಕ್ಕಿಯಾದ ಬಳಿಕ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ 16 ವರ್ಷದ ಬಾಲಕನನ್ನು ಜನರ ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಂತಾಲಿ ತೊಲದ ಕುರ್ಮಹತ್‌ನ ನಿವಾಸಿಯಾಗಿರುವ ಬಾಲಕ, ಭಾನುವಾರ ಸಂಜೆ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸಿದ ನಂತರ ಮೂವರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಥಥಿ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ವೇಳೆ, ಬಾಲಕರು ಮತ್ತು ಎಮ್ಮೆಗಳ ಹಿಂಡಿನ ಜೊತೆಯಲ್ಲಿದ್ದವರ ನಡುವೆ ವಾಗ್ವಾದ ನಡೆದಿದೆ. ಸಂತ್ರಸ್ತ ಎಮ್ಮೆಯ ಮಾಲೀಕರಿಗೆ ಪರಿಹಾರ ನೀಡಲು ಸಹ ಒಪ್ಪಿಕೊಂಡಿದ್ದಾನೆ. ಆದರೆ, ನಾಲ್ವರು ಅವನ ಮೇಲೆ ದಾಳಿ ಮಾಡಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಮೋದ್ ನಾರಾಯಣ ಸಿಂಗ್ ಹೇಳಿದ್ದಾರೆ.
ಗಾಯಾಳು ಬಾಲಕನನ್ನು ಸರಯ್ಯಹತ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹಲ್ಲೆ ನಡೆಸಿದ ಬಳಿಕ ಸಂತ್ರಸ್ತನ ಜೊತೆಗಿದ್ದ ಬಾಲಕರು ಸಹ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯರು ಗ್ರಾಮದ ಬಳಿ ರಸ್ತೆ ತಡೆ ನಡೆಸಿದರು. ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Advertisement