ನವದೆಹಲಿ: ಇಬ್ಬರು ಅಗ್ನಿವೀರರ ಸಾವಿನ ನಂತರ ಅಗ್ನಿವೀರ್ ಯೋಜನೆಯಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಕಲ್ಯಾಣ ಕ್ರಮಗಳು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಆದರೂ ನೀತಿಯನ್ನು ಮರುಪರಿಶೀಲಿಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಸೇವಾ ಸಂಬಂಧಿತ ನಿಮಯಗಳಡಿ ಸೇವೆ ಸಲ್ಲಿಸುತ್ತಿರುವ ಯುವಕರಿಗೆ ಸಂಬಂಧಿಸಿದ ಇಂಡಕ್ಷನ್ ಮತ್ತು ಸಂಬಂಧಿತ ಪ್ರಯೋಜನಗಳ ಬಗ್ಗೆ ನೀತಿಯನ್ನು ಕಳೆದ ವರ್ಷ ಜೂನ್‌ನಲ್ಲಿ ಸರ್ಕಾರವು ನಿಗದಿಪಡಿಸಿದೆ ಹೀಗಾಗಿ ಅವುಗಳಲ್ಲಿ ಯಾವುದೇ ಬದಲಾವಣೆಗಳನ್ನು ತರಲು ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ತಿಳಿದು ಬಂದಿದೆ.
ಅಗ್ನಿವೀರ್ (ಆಪರೇಟರ್) ಗವಟೆ ಅಕ್ಷಯ್ ಲಕ್ಷ್ಮಣ್ ಅವರು ಅಕ್ಟೋಬರ್ 22 ರಂದು ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ನಿಧನರಾದರು. ಈ ಸಂಬಂಧ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ʼಅಗ್ನಿವೀರ್ʼ ಭಾರತದ ವೀರರನ್ನು ಅವಮಾನಿಸುವ ಯೋಜನೆ ಎಂದು ಕರೆದಿದ್ದರು. ಸಿಯಾಚಿನ್‌ನಲ್ಲಿ ಲಕ್ಷ್ಮಣ್ ಅವರ ಸಾವಿನ ಸುದ್ದಿ ದುಃಖಕರವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಒಬ್ಬ ಯುವಕ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ. ಆದರೆ ಆತನಿಗೆ ಯಾವುದೇ ಗ್ರಾಚ್ಯುಟಿ ಇಲ್ಲ, ಅವನ ಸೇವೆಗೆ ಯಾವುದೇ ಮಿಲಿಟರಿ ಸೌಲಭ್ಯಗಳಿಲ್ಲ ಮತ್ತು ಹುತಾತ್ಮನಾದ ಅವನ ಕುಟುಂಬಕ್ಕೆ ಪಿಂಚಣಿ ಇಲ್ಲ. ಅಗ್ನಿವೀರ್ ಭಾರತದ ವೀರರನ್ನು ಅವಮಾನಿಸುವ ಯೋಜನೆಯಾಗಿದೆ ಎಂದು ಟ್ವಿಟ್ಟರ್ ನಲ್ಲಿ ರಾಹುಲ್ ಟೀಕಿಸಿದ್ದರು.
ಅಕ್ಟೋಬರ್ 11 ರಂದು ಜಮ್ಮುವಿನಲ್ಲಿ ಸಾವನ್ನಪ್ಪಿದ ಅಗ್ನಿವೀರ್ ಯೋಧ ಅಮೃತಪಾಲ್ ಸಿಂಗ್ (19) ಅವರಿಗೆ ಸೇನಾ ಅಂತ್ಯಕ್ರಿಯೆ ಗೌರವ ನೀಡದ ನಂತರ ಭಾರಿ ಟೀಕೆ ವ್ಯಕ್ತವಾಯಿತು. ಇದಾದ ನಂತರ ಸ್ವಯಂ ಪ್ರೇರಿತವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸೇನೆ ಸ್ಪಷ್ಟಪಡಿಸಿತು. ಆತ್ಮಹತ್ಯೆಯಿಂದ ಸಾವು ಸಂಭವಿಸಿದಾಗ ಗೌರವಧನ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಗ್ನಿವೀರ ಗವಟೆ ಅಕ್ಷಯ್ ಲಕ್ಷ್ಮಣ್ ಅವರ ಕುಟುಂಬಕ್ಕೆ ನೀಡಲಾಗುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಭಾರತೀಯ ಸೈನ್ಯ ವಿವರವಾದ ಸ್ಪಷ್ಟನೆ ನೀಡಿದೆ. ಮೃತರ ಕುಟುಂಬದವರಿಗೆ ಪರಿಹಾರವನ್ನು ಸೈನಿಕ ಸೇವೆಯ ಸಂಬಂಧಿತ ನಿಯಮಗಳ ಮೂಲಕವೇ ನೀಡಲಾಗುತ್ತಿದೆ.
ಭಾರತೀಯ ಸೈನ್ಯದ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ ನೀಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಲಕ್ಷ್ಮಣ್ ಅವರ ದುಃಖಿತ ಕುಟುಂಬಕ್ಕೆ ಬೆಂಬಲವನ್ನು ವ್ಯಕ್ತಪಡಿಸಲಾಗಿದೆ. ʼʼಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಅಪಪ್ರಚಾರಕ್ಕೆ ಸಂಬಂಧಿಸಿ ಈ ಕುರಿತು ಸ್ಪಷ್ಟಪಡಿಸುವುದು ಮುಖ್ಯವಾಗಿದೆ. ಮೃತ ಅಗ್ನಿವೀರರ ಕುಟುಂಬದವರಿಗೆ 48 ಲಕ್ಷದ ವಿಮಾ ಹಣದ ಮೊತ್ತ (ಇದಕ್ಕೆ ಪ್ರೀಮಿಯಂ ಕಟ್ಟಬೇಕಿಲ್ಲ), 44 ಲಕ್ಷ ರು. ಪರಿಹಾರ, ಅಗ್ನಿವೀರ್‌ನಿಂದ ಸೇವಾ ನಿಧಿ ಕೊಡುಗೆ (30%) ಮತ್ತು ಸರ್ಕಾರದಿಂದ ಇಷ್ಟೇ ಪ್ರಮಾಣದ ಹೊಂದಾಣಿಕೆಯ ಕೊಡುಗೆ, ಸಂಚಿತ ಬಡ್ಡಿಯೊಂದಿಗೆ ಕೊಡಲಾಗುತ್ತಿದೆʼʼ ಎಂದು ಭಾರತೀಯ ಸೇನೆ ತಿಳಿಸಿದೆ.
ಇದಲ್ಲದೆ, ಅಗ್ನಿವೀರ್ ನೀಡಿದ ಸೇವಾ ನಿಧಿಯನ್ನು ಸರ್ಕಾರದಿಂದ ಸಮಾನ ಹೊಂದಾಣಿಕೆಯ ಕೊಡುಗೆ ಮತ್ತು ಬಡ್ಡಿಯೊಂದಿಗೆ ಕುಟುಂಬಕ್ಕೆ ಪಾವತಿಸಲಾಗುತ್ತದೆ. ಮುಂದಿನ ಸಂಬಂಧಿಕರು ಮರಣದ ದಿನಾಂಕದಿಂದ ನಾಲ್ಕು ವರ್ಷಗಳು ಪೂರ್ಣಗೊಳ್ಳುವವರೆಗೆ ಬಾಕಿ ಅವಧಿಗೆ ವೇತನವನ್ನು ಪಡೆಯುತ್ತಾರೆ. ಸಶಸ್ತ್ರ ಪಡೆಗಳ ಯುದ್ಧ ಅಪಘಾತ ನಿಧಿಯಿಂದಲೂ ಕೊಡುಗೆ ಇರುತ್ತದೆ ಎಂದು ಮೂಲಗಳು ತಿಳಿಸಿವೆ.
Advertisement