ನೈತಿಕ ಸಮಿತಿ ಮುಂದೆ ವಕೀಲ ದೇಹದ್ರಾಯ್, ದುಬೆ ಹಾಜರು; ಅ. 31ರಂದು ಹಾಜರಾಗುವಂತೆ ಮಹುವಾ ಮೊಯಿತ್ರಾಗೆ ಸೂಚನೆ

ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ವಕೀಲ ಜೈ ಅನಂತ್ ದೆಹದ್ರಾಯ್ ಮತ್ತು ಬಿಜೆಪಿ ನಾಯಕ ನಿಶಿಕಾಂತ್ ದುಬೆ ಗುರುವಾರ ಲೋಕಸಭೆಯ ನೈತಿಕ ಸಮಿತಿ ಮುಂದೆ ಹಾಜರಾಗಿದ್ದರು. ಇದೇ ವೇಳೆ, ಅಕ್ಟೋಬರ್ 31ರಂದು ಸಮಿತಿ ಮುಂದೆ ಹಾಜರಾಗುವಂತೆ ಟಿಎಂಸಿ ಸಂಸದೆಗೆ ಸೂಚನೆ ನೀಡಲಾಗಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ- ಬಿಜೆಪಿ ಎಂಪಿ ನಿಶಿಕಾಂತ್ ದುಬೆ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ- ಬಿಜೆಪಿ ಎಂಪಿ ನಿಶಿಕಾಂತ್ ದುಬೆ

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ತಮ್ಮ ಹೇಳಿಕೆಗಳನ್ನು ದಾಖಲಿಸಲು ವಕೀಲ ಜೈ ಅನಂತ್ ದೆಹದ್ರಾಯ್ ಮತ್ತು ಬಿಜೆಪಿ ನಾಯಕ ನಿಶಿಕಾಂತ್ ದುಬೆ ಗುರುವಾರ ಲೋಕಸಭೆಯ ನೈತಿಕ ಸಮಿತಿ ಮುಂದೆ ಹಾಜರಾಗಿದ್ದರು.

ಮಹುವಾ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ಈ ಬಗ್ಗೆ ತನಿಖಾ ಸಮಿತಿ ರಚಿಸಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ. 

ದುಬೆ ಅವರ ದೂರನ್ನು ಸ್ಪೀಕರ್ ಬಿರ್ಲಾ, ಬಿಜೆಪಿ ಸದಸ್ಯ ವಿನೋದ್ ಕುಮಾರ್ ಸೋಂಕರ್ ಅವರ ನೇತೃತ್ವದ ಸಂಸತ್ತಿನ ನೈತಿಕ ಸಮಿತಿಗೆ ಒಪ್ಪಿಸಿದ್ದಾರೆ.

ಮೊದಲಿಗೆ ದೇಹದ್ರಾಯ್ ಅವರು ನೈತಿಕ ಸಮಿತಿ ಮುಂದೆ ತಮ್ಮ ಹೇಳಿಕೆ ದಾಖಲಿಸಿದರು. ದುಬೆ ಮಧ್ಯಾಹ್ನ ಸಮಿತಿ ಮುಂದೆ ಹಾಜರಾದರು.

ಇದಕ್ಕೂ ಮುನ್ನ ತಾವು ಮಾಡಿರುವ ಆರೋಪಗಳನ್ನು ಮೊಯಿತ್ರಾ ಅವರು ತಳ್ಳಿಹಾಕಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದುಬೆ, ಸಮಿತಿಯು ಕೇಳುವ ಯಾವುದೇ ಪ್ರಶ್ನೆಗಳಿಗಳಿಗಾದರೂ ನಾನು ಉತ್ತರಿಸುತ್ತೇನೆ. ದಾಖಲೆಗಳು ಸುಳ್ಳಾಗುವುದಿಲ್ಲ ಎಂದು ತಿಳಿಸಿದರು.

ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹೀರಾನಂದಾನಿ ಸಮೂಹದ ಸಿಇಒ ದರ್ಶನ್ ಹೀರಾನಂದಾನಿ ಅವರಿಂದ ಮಹುವಾ ಅವರು ಲಂಚ ಪಡೆದಿದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಮೊಯಿತ್ರಾ ಅವರು ಕೇಳಿರುವ 61 ಪ್ರಶ್ನೆಗಳಲ್ಲಿ 50 ಪ್ರಶ್ನೆಗಳು ಅದಾನಿ ಗ್ರೂಪ್‌ನ ಮೇಲೆ ಕೇಂದ್ರೀಕೃತವಾಗಿವೆ. ಪ್ರತಿಸ್ಪರ್ಧಿ ಉದ್ಯಮಿಯೊಬ್ಬರ ಇಚ್ಛೆಯ ಮೇರೆಗೆ ಟಿಎಂಸಿ ಸಂಸದೆ ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ದುಬೆ ಅಕ್ಟೋಬರ್ 15ರಂದು ಸ್ಪೀಕರ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ದೂರಿದ್ದಾರೆ. 

ಮೊಯಿತ್ರಾ ಅವರು ಅದಾನಿ ಗ್ರೂಪ್ ಮತ್ತು ದುಬೆ ವಿರುದ್ಧ ದಾಳಿಯನ್ನು ಮುಂದುವರೆಸಿದ್ದಾರೆ ಮತ್ತು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದೆಲ್ಲದರ ಹಿಂದೆ ಅದಾನಿ ಗ್ರೂಪ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಅಕ್ಟೋಬರ್ 31ರಂದು ಸಮಿತಿ ಮುಂದೆ ಹಾಜರಾಗುವಂತೆ ಟಿಎಂಸಿ ಸಂಸದೆಗೆ ಸೂಚನೆ

ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ ಅವರು ಅಕ್ಟೋಬರ್ 31 ರಂದು ತನ್ನ ಮುಂದೆ ಹಾಜರಾಗುವಂತೆ ಲೋಕಸಭೆಯ ನೈತಿಕ ಸಮಿತಿ ಸೂಚಿಸಿದೆ. 

ಗುರುವಾರ ಸಮಿತಿಯ ಸಭೆಯ ನಂತರ, ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ ಸೋಂಕರ್ ಅವರು, ಟಿಎಂಸಿ ಸಂಸದರ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಗೃಹ ವ್ಯವಹಾರಗಳು ಮತ್ತು ಐಟಿ ಸಚಿವಾಲಯಗಳಿಂದ ನೆರವು ಪಡೆಯಲಾಗುತ್ತದೆ. ಅಕ್ಟೋಬರ್ 31 ರಂದು ಸಮಿತಿಯ ಮುಂದೆ ಹಾಜರಾಗುವಂತೆ ಮೊಯಿತ್ರಾ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com