ಕೋಝಿಕ್ಕೋಡ್‌: ಮಾರಣಾಂತಿಕ ನಿಪಾ ವೈರಸ್‌ನಿಂದ ಇಬ್ಬರು ಸಾವು, ರಾಷ್ಟ್ರೀಯ ವೈರಾಣು ಸಂಸ್ಥೆಯಿಂದ ದೃಢ!

ಮಾರಣಾಂತಿಕ ನಿಪಾ ವೈರಸ್‌ನಿಂದ ಕೇರಳದ ಕೋಝಿಕೋಡ್‌ನಲ್ಲಿ ಇಬ್ಬರು ಸಾವು ಸಂಭವಿಸಿರುವುದು ದೃಢಪಟ್ಟಿದೆ. ಮೃತಪಟ್ಟವರು ಮತ್ತು ಆಸ್ಪತ್ರೆಗೆ ದಾಖಲಾದವರ ರಕ್ತದ ಮಾದರಿಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು  ಸಂಸ್ಥೆಗೆ ಕಳುಹಿಸಲಾಗಿತ್ತು. ಮಂಗಳವಾರ ಸಂಜೆ ಈ ದೃಢೀಕರಣ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಝಿಕೋಡ್‌: ಮಾರಣಾಂತಿಕ ನಿಪಾ ವೈರಸ್‌ನಿಂದ ಕೇರಳದ ಕೋಝಿಕೋಡ್‌ನಲ್ಲಿ ಇಬ್ಬರು ಸಾವು ಸಂಭವಿಸಿರುವುದು ದೃಢಪಟ್ಟಿದೆ. ಮೃತಪಟ್ಟವರು ಮತ್ತು ಆಸ್ಪತ್ರೆಗೆ ದಾಖಲಾದವರ ರಕ್ತದ ಮಾದರಿಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು  ಸಂಸ್ಥೆಗೆ ಕಳುಹಿಸಲಾಗಿತ್ತು. ಮಂಗಳವಾರ ಸಂಜೆ ಈ ದೃಢೀಕರಣ ಬಂದಿದೆ. ಇಬ್ಬರು ಮೃತ ವ್ಯಕ್ತಿಗಳ ಸಂಪರ್ಕಕ್ಕೆ ಬಂದ 70 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರ ಮೇಲೆ ನಿಗಾ ಇರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಈ ಹಿಂದೆ ಕೇರಳದ ಆರೋಗ್ಯ ಇಲಾಖೆ ಅಧಿಕಾರಿಗಳು ಅಸಹಜ ಸಾವು ಎಂದು ಘೋಷಿಸಿದ್ದರು. ಮೃತರಿಬ್ಬರು ಕ್ರಮವಾಗಿ ಕುಟ್ಟಿಯಾಡಿಯ ಆಯಂಚೇರಿ ಮತ್ತು ನಡಪ್ಪುರಂ ಕ್ಷೇತ್ರದ ಮರುತೋಂಕರ ಪ್ರದೇಶದವರು ಎಂದು ಗುರುತಿಸಲಾಗಿದ್ದು, 
ಈ ಜಿಲ್ಲೆಗಳಿಗೆ ಜಿಲ್ಲಾಡಳಿತ ಮಂಗಳವಾರ ರಜೆ ಘೋಷಿಸಿದೆ. ಸಾರ್ವಜನಿಕರು ಶಾಂತವಾಗಿ, ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ. ಮೃತರು ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.

ಮೃತರ ಸಂಬಂಧಿಕರೊಬ್ಬರನ್ನು ತೀವ್ರ ನಿಗಾ ಘಟಕದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಂದೇ ಕುಟುಂಬದ ಮೂವರು ಐಸೋಲೇಶನ್‌ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಕೋಝಿಕ್ಕೋಡ್‌ನಲ್ಲಿ ಸಭೆ ಕರೆದಿದ್ದಾರೆ.

19 ಮೇ 2018 ರಂದು ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಪಾ ವೈರಸ್ ರೋಗ ಹರಡುವಿಕೆ ವರದಿಯಾಗಿತ್ತು. ದಕ್ಷಿಣ ಭಾರತದಲ್ಲಿ ಇದು ಮೊದಲ ನಿಪಾ ಪ್ರಕರಣ. 2019 ರಲ್ಲಿ ಎರ್ನಾಕುಲಂನಲ್ಲಿ ಎರಡನೇ ಪ್ರಕರಣ ವರದಿಯಾಗಿತ್ತು. ನಂತರ 2021 ರಲ್ಲಿ ಮತ್ತೆ ಕೋಝಿಕೋಡ್‌ನಲ್ಲಿ ಪ್ರಕರಣ ವರದಿಯಾಗಿತ್ತು. 12 ವರ್ಷದ ಮಗು ಈ ಸೋಂಕಿನಿಂದ ಮೃತಪಟ್ಟಿತ್ತು.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ನಿಪಾ ವೈರಸ್ ಝೂನೋಟಿಕ್ (ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ) ಮತ್ತು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಜನರ ನಡುವೆ ಹರಡಬಹುದು. ಸೋಂಕಿತ ಜನರಲ್ಲಿ, ಇದು ಲಕ್ಷಣರಹಿತ ಸೋಂಕಿನಿಂದ ತೀವ್ರವಾದ ಉಸಿರಾಟ ಮತ್ತು  ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com