ಅನಂತನಾಗ್ ಎನ್ಕೌಂಟರ್: ನಾಪತ್ತೆಯಾಗಿದ್ದ ಯೋಧನ ಹತ್ಯೆ, ಉಗ್ರರಿಂದ ಕೃತ್ಯ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ವಿರುದ್ಧ ಎನ್ಕೌಂಟರ್ ಕಾರ್ಯಾಚರಣೆ ಮುಂದುವರೆದಿದ್ದು, ಈ ನಡುವೆ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯೋಧ ಉಗ್ರರಿಂದ ಹತ್ಯೆಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಅನಂತನಾಗ್ ಎನ್ಕೌಂಟರ್
ಅನಂತನಾಗ್ ಎನ್ಕೌಂಟರ್

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ವಿರುದ್ಧ ಎನ್ಕೌಂಟರ್ ಕಾರ್ಯಾಚರಣೆ ಮುಂದುವರೆದಿದ್ದು, ಈ ನಡುವೆ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯೋಧ ಉಗ್ರರಿಂದ ಹತ್ಯೆಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, ಈ ಎನ್‌ಕೌಂಟರ್‌ನಲ್ಲಿ ನಿನ್ನೆಯಿಂದ ನಾಪತ್ತೆಯಾಗಿದ್ದ ಮತ್ತೊಬ್ಬ ಯೋಧ ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಬುಧವಾರ ಸಂಜೆ ಆರಂಭವಾದ ಎನ್‌ಕೌಂಟರ್ ಮೂರನೇ ದಿನಕ್ಕೆ (ಶುಕ್ರವಾರ) ಕಾಲಿಟ್ಟಿದೆ. ಅನಂತ್‌ನಾಗ್‌ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರ ಸ್ಥಳವನ್ನು ಗುರುತಿಸಲು ಸೇನೆಯು ಇದೀಗ ಡ್ರೋನ್‌ಗಳನ್ನು ಬಳಸುತ್ತಿದೆ. ಈ ನಡುವೆ ನಿನ್ನೆಯಿಂದ ನಾಪತ್ತೆಯಾಗಿದ್ದ ಯೋಧನ ಮೃತದೇಹ ಪತ್ತೆಯಾಗಿದ್ದು, ಆತ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭದ್ರತಾ ಪಡೆಯ ಅಧಿಕಾರಿಗಳು, 'ಅನಂತನಾಗ್ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಯೋಧ ಪ್ರಾಣ ಕಳೆದುಕೊಂಡಿದ್ದಾರೆ. ಅವರು ನಿನ್ನೆಯಿಂದ ನಾಪತ್ತೆಯಾಗಿದ್ದರು. ಅನಂತನಾಗ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಜಂಟಿ ಭದ್ರತಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರು ತಪ್ಪಿಸಿಕೊಂಡಿದ್ದರು. ಪಡೆಗಳು ಡ್ರೋನ್‌ಗಳನ್ನು ಬಳಸಿಕೊಂಡು ಶಂಕಿತ ಭಯೋತ್ಪಾದಕರ ಅಡಗುತಾಣಗಳ ಮೇಲೆ ಗ್ರೆನೇಡ್‌ಗಳನ್ನು ಹಾಕುತ್ತಿವೆ. ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬುಧವಾರ, ಅನಂತನಾಗ್‌ನ ಕೋಕರ್‌ನಾಗ್ ಪ್ರದೇಶದ ಗದೂಲ್ ಗ್ರಾಮದ ಸುತ್ತಮುತ್ತಲಿನ ಅರಣ್ಯಗಳಲ್ಲಿ ಭಯೋತ್ಪಾದಕರನ್ನು ಪತ್ತೆಮಾಡಲು ಸೇನೆ ಮತ್ತು ಪೊಲೀಸರ ಸಂಯೋಜಿತ ಪಡೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಪ್ರದೇಶದಲ್ಲಿ ಎರಡರಿಂದ ಮೂವರು ಭಯೋತ್ಪಾದಕರು ಇರುವ ಬಗ್ಗೆ ಸುಳಿವು ಸಿಕ್ಕ ನಂತರ ಕಾರ್ಯಾಚರಣೆ ನಡೆಸಲಾಯಿತು. ಈಗ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿವೆ. ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಚಕಮಕಿಯ ಸಮಯದಲ್ಲಿ, ಕರ್ನಲ್ ಮನ್‌ಪ್ರೀತ್ ಸಿಂಗ್ ಮತ್ತು 19 ರಾಷ್ಟ್ರೀಯ ರೈಫಲ್ಸ್‌ನ ಮೇಜರ್ ಆಶಿಶ್ ಧೋಂಚಕ್ ಅವರು ಮೃತಪಟ್ಟಿದ್ದಾರೆ. ಇದಲ್ಲದೆ ಓರ್ವ ಪೊಲೀಸ್ ಅಧಿಕಾರಿ ಅಂದರೆ ಕಾಶ್ಮೀರ ಪೊಲೀಸ್‌ ಪಡೆಯ ಡಿಎಸ್‌ಪಿ ಹುಮಾಯೂನ್ ಭಟ್ ಸಾವನಪ್ಪಿದ್ದರೆ ಇದೀಗ ಮತ್ತೋರ್ವ ಸೈನಿಕನ ಸಾವಿನೊಂದಿಗೆ ಎನ್ಕೌಂಟರ್ ನಲ್ಲಿ ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

2023 ರಲ್ಲಿ ಸೇನಾ ಪದಕ ಪುರಸ್ಕೃತರಾದ ಮೇಜರ್ ಧೋಂಚಕ್ ಅವರ ಪಾರ್ಥೀವ ಶರೀರವು ಹರಿಯಾಣದ ಪಾಣಿಪತ್ ತಲುಪಿದ್ದು ಅಲ್ಲಿ ಇಂದು ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು. ಪತ್ನಿ ಮತ್ತು ಮೂರು ತಿಂಗಳ ಮಗನನ್ನು ಅಗಲಿರುವ ಡಿಎಸ್‌ಪಿ ಭಟ್ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ಬುದ್ಗಾಮ್‌ನಲ್ಲಿ ನೆರವೇರಿತು.

ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿವೆ. ಕೋಕರ್ನಾಗ್ ಪ್ರದೇಶದಲ್ಲಿ 48 ಗಂಟೆಗಳ ಕಾಲ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದಕರು ಪಾಕಿಸ್ತಾನ ಬೆಂಬಲಿತ ಲಷ್ಕರ್-ಎ-ತೊಯ್ಬಾದ ಗುಂಪಿನ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನವರು ಎಂದು ಶಂಕಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com