ನವದೆಹಲಿ: 2013ರ ಕೇದಾರನಾಥ ದುರಂತದಂತೆಯೇ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಉಂಟಾದ ವಿನಾಶವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಧೀರ್ಘ ಪತ್ರವೊಂದನ್ನು ಬರೆದಿರುವ ಅವರು, 'ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ನೀಡಲು ಮತ್ತು ರಾಜ್ಯವನ್ನು ಪುನರ್ನಿರ್ಮಿಸಲು ಆರ್ಥಿಕ ಸಹಾಯವನ್ನು ನೀಡಬೇಕಿದೆ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕೋರಿದ್ದಾರೆ.
ಜುಲೈ 14 ಮತ್ತು 15 ರಂದು ಹಿಮಾಚಲ ಪ್ರದೇಶದ ಕುಲು ಮತ್ತು ಮಂಡಿ ಜಿಲ್ಲೆಗಳಲ್ಲಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳು ವ್ಯಾಪಕ ಹಾನಿಯನ್ನುಂಟುಮಾಡಿದ್ದವು. ಈ ವಾರದ ಆರಂಭದಲ್ಲಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, ಹಿಮಾಚಲ ಪ್ರದೇಶವು ದೇವರ ನಾಡು ಮಾತ್ರವಲ್ಲದೆ, ನಿಜವಾದ, ಸರಳ ಮತ್ತು ಶ್ರಮಜೀವಿಗಳ ರಾಜ್ಯವಾಗಿದೆ. ಹಿಮಾಚಲದ ಮಹಿಳೆಯರು, ರೈತರು, ಉದ್ಯೋಗಿಗಳು, ಉದ್ಯಮಿಗಳು ಮತ್ತು ಯುವಕರು ತುಂಬಾ ಶ್ರಮಶೀಲರು ಮತ್ತು ಸ್ವಾಭಿಮಾನಿಗಳು. ಇಂದು ಅದೇ ಜನರು ಅತೀವ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಪ್ರವಾಹ ಮತ್ತು ಭೂಕುಸಿತಗಳು ರಾಜ್ಯದಲ್ಲಿ ಭಾರಿ ನಾಶವನ್ನುಂಟುಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ, ನಾನು ಶಿಮ್ಲಾ, ಕುಲು, ಮನಾಲಿ ಮತ್ತು ಮಂಡಿಯಲ್ಲಿ ವಿಪತ್ತು ಸಂತ್ರಸ್ತರನ್ನು ಭೇಟಿ ಮಾಡಿದ್ದೇನೆ. ಎಲ್ಲೆಡೆ ವಿನಾಶವನ್ನು ನೋಡಿ ತುಂಬಾ ದುಃಖವಾಯಿತು. ಈ ದುರಂತದಲ್ಲಿ ಇದುವರೆಗೆ 428 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಜನರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ಸತ್ತವರಲ್ಲಿ ಚಿಕ್ಕ ಮಕ್ಕಳೂ ಸೇರಿದ್ದಾರೆ, ಅವರು ತಮ್ಮ ತಾಯಂದಿರೊಂದಿಗೆ 'ಸಾವನ್' ಕೊನೆಯ ಸೋಮವಾರದಂದು ಮುಂಜಾನೆ ಶಿವ ದೇವಾಲಯಕ್ಕೆ ಹೋಗಿದ್ದರು. ಆದರ ದುರಂತ ಅವರನ್ನು ಬಲಿ ಪಡೆದಿದೆ. ಪ್ರವಾಹದಿಂದಾಗಿ ರಾಜ್ಯದಲ್ಲಿ 10,000 ಕೋಳಿಗಳು ಮತ್ತು 6,000 ಕ್ಕೂ ಹೆಚ್ಚು ಹಸುಗಳು, ಎಮ್ಮೆಗಳು ಮತ್ತು ಇತರ ಸಾಕುಪ್ರಾಣಿಗಳು ಸೇರಿದಂತೆ 16,000 ಕ್ಕೂ ಹೆಚ್ಚು ಪ್ರಾಣಿಗಳು ಮತ್ತು ಪಕ್ಷಿಗಳು ಸಾವನ್ನಪ್ಪಿವೆ. 13,000 ಕ್ಕೂ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿವೆ ಎಂದು ಹೇಳಿದರು.
ಅಂತೆಯೇ "ಶಿಮ್ಲಾದಿಂದ ಪರ್ವಾನೂ ರಾಷ್ಟ್ರೀಯ ಹೆದ್ದಾರಿ ಮತ್ತು ಕುಲು-ಮನಾಲಿ-ಲೇಹ್ ಹೆದ್ದಾರಿಯ ದೊಡ್ಡ ಭಾಗಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ರಾಜ್ಯದ ಅನೇಕ ರಸ್ತೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿವೆ. ರಾಜ್ಯವು ಸಾವಿರಾರು ಕೋಟಿ ಮೌಲ್ಯದ ನಷ್ಟವನ್ನು ಅನುಭವಿಸಿದೆ. ಗುಡ್ಡಗಾಡು ಪ್ರದೇಶದಲ್ಲಿನ ಕಾಂಗ್ರೆಸ್ ಸರ್ಕಾರವು ವಿನಾಶವನ್ನು ಎದುರಿಸಲು ತನ್ನ ಮಟ್ಟದಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಹಿಮಾಚಲ ಪ್ರದೇಶದ ಜನರು ಬಿಕ್ಕಟ್ಟನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದನ್ನು ನಾನು ನೋಡಿದ್ದೇನೆ. ಕೆಲವು ಸ್ಥಳಗಳಲ್ಲಿ ಕೆಲವರು ರಸ್ತೆಗಳ ದುರಸ್ತಿಗಾಗಿ 'ಶ್ರಮದಾನ'ದಲ್ಲಿ ತೊಡಗಿದ್ದರೆ, ಇತರ ಸ್ಥಳಗಳಲ್ಲಿ ವಿಪತ್ತು ಪೀಡಿತ ಜನರು, ಶಾಲೆಗಳು ಮಕ್ಕಳು ಮತ್ತು ರೈತರು ದೇಣಿಗೆ ಸಂಗ್ರಹಿಸುವ ಮೂಲಕ ಪರಿಹಾರ ಕಾರ್ಯಕ್ರಮಗಳಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ಒಗ್ಗಟ್ಟಿನ ಭಾವನೆಯಿಂದ ನಾನು ತುಂಬಾ ಪ್ರಭಾವಿತಳಾಗಿದ್ದೆನೆ. ಈ ಭಾವನೆಯಿಂದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ಅವರು ಹೇಳಿದರು.
ಈ ದುರಂತದ ಸಂದರ್ಭದಲ್ಲಿ, ಹಿಮಾಚಲ ಪ್ರದೇಶದ ಜನರು ಸಹಾಯಕ್ಕಾಗಿ ಎದುರು ನೋಡುತ್ತಿರುವಾಗ, ಕೇಂದ್ರ ಸರ್ಕಾರವು ವಿದೇಶಿ ಸೇಬುಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿರುವುದು ರಾಜ್ಯದ ಸೇಬು ರೈತರು ಮತ್ತು ತೋಟಗಾರರಿಗೆ ಎರಡು ಆರ್ಥಿಕ ಹೊಡೆತವಾಗಿದೆ. ನನ್ನ ತಿಳುವಳಿಕೆಯಲ್ಲಿ, ಈ ಕಷ್ಟದ ಸಮಯದಲ್ಲಿ ರೈತರಿಗೆ ಅಂತಹ ಹೊಡೆತವನ್ನು ಸರ್ಕಾರ ನೀಡಬಾರದು, ಬದಲಿಗೆ ಹಿಮಾಚಲದ ರೈತರಿಗೆ ಕೇಂದ್ರ ಸರ್ಕಾರದಿಂದ ಕೆಲವು ರೀತಿಯ ಆರ್ಥಿಕ ಸಹಾಯವನ್ನು ಪಡೆದರೆ ಅವರಿಗೆ ಪರಿಹಾರ ಸಿಗುತ್ತದೆ. 2013ರ ಕೇದಾರನಾಥ ದುರಂತದಂತೆಯೇ ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಮತ್ತು ಸಂತ್ರಸ್ತರಿಗೆ ಮತ್ತು ರಾಜ್ಯಕ್ಕೆ ಆರ್ಥಿಕ ನೆರವು ನೀಡಬೇಕು, ಇದರಿಂದಾಗಿ ಹಿಮಾಚಲದ ಸಹೋದರ ಸಹೋದರಿಯರಿಗೆ ಪರಿಹಾರ ಸಿಗುತ್ತದೆ ಮತ್ತು ರಾಜ್ಯವನ್ನು ಸರಿಯಾಗಿ ಪುನರ್ನಿರ್ಮಿಸಲು ನಾನು ನಿಮಗೆ ಮನವಿ ಮಾಡುತ್ತೇನೆ ಎಂದು ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
"ಇಂದು, ಇಡೀ ದೇಶವು ಮುಂದೆ ಬರುತ್ತಿದೆ ಮತ್ತು ಹಿಮಾಚಲದೊಂದಿಗೆ ನಿಂತಿದೆ. ಹಿಮಾಚಲದ ಜನರ ಬಗ್ಗೆ ಸಂವೇದನಾಶೀಲರಾಗಿರುವಾಗ ನೀವು ಸಹಾಯ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ನಾನು ಪೂರ್ಣ ಭರವಸೆ ಹೊಂದಿದ್ದೇನೆ" ಎಂದು ಅವರು ಹೇಳಿದ್ದಾರೆ.
ಜೂನ್ 24 ರಂದು ಮುಂಗಾರು ಪ್ರಾರಂಭವಾದಾಗಿನಿಂದ ಸೆಪ್ಟೆಂಬರ್ 12 ರವರೆಗೆ ಹಿಮಾಚಲ ಪ್ರದೇಶವು 8,679 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ. ಮಾನ್ಸೂನ್ ಸಮಯದಲ್ಲಿ 165 ಭೂಕುಸಿತಗಳು ಮತ್ತು 72 ಹಠಾತ್ ಪ್ರವಾಹಗಳು ವರದಿಯಾಗಿವೆ. ಭೂಕುಸಿತದಲ್ಲಿ 111 ಸಾವುಗಳಲ್ಲಿ, 94 ಕುಲು, ಮಂಡಿ, ಶಿಮ್ಲಾ ಮತ್ತು ಸೋಲನ್ ಜಿಲ್ಲೆಗಳಿಂದ ವರದಿಯಾಗಿದೆ, ಆದರೆ ಹಠಾತ್ ಪ್ರವಾಹದಿಂದಾಗಿ 19 ಸಾವುಗಳಲ್ಲಿ 18 ಈ ಜಿಲ್ಲೆಗಳಲ್ಲಿಯೂ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು 12,000 ಕೋಟಿ ರೂಪಾಯಿ ನಷ್ಟವನ್ನು ಅಂದಾಜಿಸಿದ್ದಾರೆ ಮತ್ತು ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಅವರೂ ಕೂಡ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ್ದಾರೆ.
Advertisement