ಜಮೀನು ವಿವಾದ: ಒಂದೇ ಕುಟುಂಬದ ಮೂವರಿಗೆ ಗುಂಡಿಕ್ಕಿ ಹತ್ಯೆ; ಆರೋಪಿಗಳ ಮನೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಮೊಹಿಯುದ್ದೀನ್‌ಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಕೊಂದಿರುವ ಅಮಾನವೀಯ ಘಟನೆ ಗುರುವಾರ ರಾತ್ರಿ  ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಉತ್ತರ ಪ್ರದೇಶದ ಮೊಹಿಯುದ್ದೀನ್‌ಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಕೊಂದಿರುವ ಅಮಾನವೀಯ ಘಟನೆ ಗುರುವಾರ ರಾತ್ರಿ  ನಡೆದಿದೆ.

ಮೃತರನ್ನು ಹೋರಿಲಾಲ್(62), ಅವರ ಮಗಳು ಬ್ರಿಜ್ಕಾಲಿ(22) ಮತ್ತು ಆಕೆಯ ಪತಿ ಶಿವಸಾಗರ್ (26) ಎಂದು ಗುರುತಿಸಲಾಗಿದೆ. ಮೃತ ಕುಟುಂಬ ದಲಿತರಾಗಿದ್ದು, ಪಾಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ತಮ್ಮ ಗುಡಿಸಲಿನ ಹೊರಗೆ ಮಲಗಿದ್ದ ಈ ಮೂವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮೂವರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ತ್ರಿವಳಿ ಹತ್ಯೆಯ ನಂತರ, ಕೋಪಗೊಂಡ ಸಂಬಂಧಿಕರು ಮತ್ತು ಕೆಲವು ಗ್ರಾಮಸ್ಥರು ಆರೋಪಿಗಳಿಗೆ ಸೇರಿದ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಕೌಶಂಬಿ ಜಿಲ್ಲೆಯ ಪಾಂಡಾ ಕ್ರಾಸಿಂಗ್‌ನಲ್ಲಿ ಹೋರಿಲಾಲ್‌ ಅವರ ತುಂಡು ಭೂಮಿ ಇದೆ. ಈ ಭೂಮಿ ಸಂಬಂಧ ಹೋರಿಲಾಲ್‌ ಮತ್ತು ನೆರೆಹೊರೆಯವರಾದ ಆರೋಪಿಗಳ ನಡುವೆ ಜಗಳ ನಡೆದಿತ್ತು ಎಂದು ಮೃತರ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿವಾದಿತ ಜಮೀನಿನಲ್ಲಿಯೇ ಹೋರಿಲಾಲ್ ಅವರು ಗುಡಿಸಲು ನಿರ್ಮಿಸಿಕೊಂಡಿದ್ದರು ಮತ್ತು ಅಲ್ಲಿಯೇ ತಮ್ಮ ಮಗಳು ಮತ್ತು ಅಳಿಯನೊಂದಿಗೆ ವಾಸಿಸುತ್ತಿದ್ದರು.

ಸ್ಥಳೀಯ ಮೂಲಗಳ ಪ್ರಕಾರ, ತ್ರಿವಳಿ ಹತ್ಯೆಯ ನಂತರ, ಹೋರಿಲಾಲ್ ಅವರ ಸಂಬಂಧಿಕರು ಮತ್ತು ಕೆಲವು ಗ್ರಾಮಸ್ಥರು ಆರೋಪಿಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಕಲ್ಲು ತೂರಾಟ ಸಹ ನಡೆಸಿದ್ದಾರೆ. ಈ ವೇಳೆ ಚೈಲ್ ತಹಸೀಲ್ದಾರ್ ಪುಷ್ಪೇಂದ್ರ ಗೌತಮ್ ಅವರ ತಲೆಗೆ ಗಾಯವಾಗಿದೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು ಮತ್ತು ಪೊಲೀಸ್ ತಂಡ ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿತು ಎಂದು ಕೌಶಾಂಬಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬ್ರಜೇಶ್ ಕುಮಾರ್ ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com